60 ಸಾವಿರ ಮನೆಗಳ ನಿರ್ಮಾಣ ಯೋಜನೆಗೆ ಆ.12ರಂದು ಚಾಲನೆ

ಬೆಂಗಳೂರು, ಆ.6- ರಾಜ್ಯಾದ್ಯಂತ ಸುಮಾರು 60 ಸಾವಿರ ಮನೆಗಳನ್ನು ನಿರ್ಮಿಸುವ ಮುಖ್ಯಮಂತ್ರಿ ವಸತಿ ಯೋಜನೆಗೆ ಇದೇ 12ರಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಗುವುದು ಎಂದು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅತ್ಯಂತ ಮಹತ್ವದ ಯೋಜನೆಯಾಗಿದ್ದು, ಒಟ್ಟು 60ಸಾವಿರ ಮನೆಗಳಲ್ಲಿ 22 ಸಾವಿರ ಮನೆಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಮೀಸಲಿಡಲಾಗುವುದು. ಮನೆ ನಿರ್ಮಾಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆ.12ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹುಬ್ಬಳ್ಳಿ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಹಿಂದೆ ರಾಜೀವ್‍ಗಾಂಧಿ ವಸತಿ ಯೋಜನೆಯಡಿ ಈ ರೀತಿಯ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಶೇ.50ರಷ್ಟು ಅನುದಾನ ನೀಡುತ್ತಿತ್ತು. ರಾಜ್ಯ ಸರ್ಕಾರ ಶೇ.40ರಷ್ಟು , ಫಲಾನುಭವಿಗಳು ಶೇ.10ರಷ್ಟು ವೆಚ್ಚ ಭರಿಸುತ್ತಿದ್ದರು. ಮುಖ್ಯಮಂತ್ರಿ ವಸತಿ ಯೋಜನೆಯಡಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಕೇಂದ್ರ ಸರ್ಕಾರ 1.5ಲಕ್ಷ , ರಾಜ್ಯ ಸರ್ಕಾರ 2 ಲಕ್ಷ ಭರಿಸುತ್ತಿದ್ದು, ಒಟ್ಟು 4 ಲಕ್ಷ ವೆಚ್ಚದ ಮನೆಗೆ ಉಳಿದಿದ್ದನ್ನು ಫಲಾನುಭವಿಗಳು ತುಂಬಬೇಕಿದೆ ಎಂದು ಹೇಳಿದರು.

ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ 1.5, ರಾಜ್ಯ ಸರ್ಕಾರ 1.2 ಲಕ್ಷ ಅನುದಾನ ನೀಡುತ್ತಿದ್ದು, ಉಳಿದಿದ್ದನ್ನು ಬ್ಯಾಂಕ್ ನೆರವಿನ ಮೂಲಕ ಫಲಾನುಭವಿಗಳು ಭರಿಸಬೇಕಿದೆ. 8 ತಿಂಗಳಿನಲ್ಲಿ ಈ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಗೆ ಅರ್ಜಿ ಕರೆಯಲಾಗಿತ್ತು. 45 ಸಾವಿರ ಅರ್ಜಿಗಳು ಬಂದಿದ್ದು, ಆ ಫಲಾನುಭವಿಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಎಲ್ಲೆಲ್ಲಿ ಜಾಗ ಲಭ್ಯವಿದೆಯೋ ಆ ಭಾಗದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತದೆ. ಎರಡು ಕೊಠಡಿಗಳ ಮನೆಗಳಿಗೆ ಸಬ್ಸಿಡಿ ನೀಡಲಾಗುವುದಿಲ್ಲ. ಒಂದು ಕೊಠಡಿಯ ಮನೆಗೆ ಸಬ್ಸಿಡಿ ನೀಡಲಾಗುತ್ತದೆ ಎಂದು ಹೇಳಿದರು.

ಗೃಹ ಮಂಡಳಿಯಿಂದ ಮಂಜೂರಾಗಿರುವ ಮನೆಗಳನ್ನು ಫಲಾನುಭವಿಗಳು ಉಪಯೋಗಿಸದೇ ಇದ್ದರೆ ಅವುಗಳನ್ನು ತೆರವುಗೊಳಿಸಲು ಒಂದು ತಿಂಗಳು ಕಾಲವಕಾಶ ನೀಡುವುದಾಗಿ ಯು.ಟಿ.ಖಾದರ್ ಹೇಳಿದರು.

ಜಿಪಿಎಸ್ ಆಧಾರಿತವಾಗಿ ಮನೆಗಳನ್ನು ಗುರುತಿಸಲಾಗುತ್ತಿದೆ. ಯಾರಾದರೂ ಫಲಾನುಭವಿಗಳ ಅವುಗಳ ಸ್ವಾಧೀನದಲ್ಲಿ ಇಲ್ಲದೆ ಇದ್ದರೆ ನೋಟಿಸ್ ಕೊಟ್ಟು ಖಾಲಿ ಮಾಡಿಸುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ