ಡ್ರೋನ್‍ಗಳನ್ನು ಅಭಿವೃದ್ಧಿಗೊಳಿಸುವಂತೆ ಸ್ಟಾರ್ಟ್‍ಅಪ್ ಕಂಪನಿಗಳಿಗೆ ರಕ್ಷಣಾ ಸಚಿವೆ ಸೂಚನೆ

 

ಬೆಂಗಳೂರು, ಆ.5-ಅಮೆರಿಕದಿಂದ ಆಕ್ರಮಣಕಾರಿ ಪ್ರೆಡಟರ್-ಬಿ ಡ್ರೋನ್(ಹಾರುವ ಯಂತ್ರ)ಗಳನ್ನು ಹೊಂದಲು ಭಾರತ ಮುಂದಾಗಿರುವಾಗಲೇ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದ ನವೋದ್ಯಮಗಳಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.
ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಹಾಗೂ ನಿಖರವಾಗಿ ವೈರಿಗಳ ಮೇಲೆ ದಾಳಿ ನಡೆಸಬಲ್ಲ ಮಾನವರಹಿತ ಡ್ರೋನ್‍ಗಳನ್ನು ಅಭಿವೃದ್ಧಿಗೊಳಿಸುವಂತೆ ಸ್ಟಾರ್ಟ್‍ಅಪ್ ಕಂಪನಿಗಳಿಗೆ ಸೂಚಿಸಿದ್ದಾರೆ.
ಉದ್ಯಾನನಗರಿ ಬೆಂಗಳೂರಿನಲ್ಲಿ ನಿನ್ನೆ ಭಾರತ ರಕ್ಷಣೆ : ನವೋದ್ಯಮ ಸವಾಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡ್ರೋನ್‍ಗಳು ಹಾಗೂ ಮಾನವರಹಿತ ಹಾರುವ ಯಂತ್ರಗಳು ವಿಶ್ವದಾದ್ಯಂತ ಸಶಸ್ತ್ರ ಪಡೆಗಳ ದೊಡ್ಡ ಆಸ್ತಿಯಾಗಿದೆ. ಭಾರತ ಸಶಸ್ತ್ರ ಪಡೆಗಳು ಇವುಗಳಿಗೆ ಇರುವ ಬೇಡಿಕೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಅವರು ಹೇಳಿದರು.
ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಹಾಗೂ ರಕ್ಷಣೆಗಾಗಿ ದಾಳಿ ನಡೆಸಬಲ್ಲ ಮಾನವರಹಿತ ಡ್ರೋನ್‍ಗಳನ್ನು ಕೆಲವು ಮುಂದುವರಿದ ರಾಷ್ಟ್ರಗಳು ಅಭಿವೃದ್ದಿಗೊಳಿಸಿವೆ. ಕೆಲವು ರಾಷ್ಟ್ರಗಳು ಇಂಥ ತಂತ್ರಜ್ಞಾನದಿಂದ ಅಸೂಯೆಪಡುವಂತಾಗಿದೆ. ಇಂಥ ಡ್ರೋನ್‍ಗಳನ್ನು ನಾವು ಇನ್ನು ಅಭಿವೃದ್ದಿಗೊಳಿಸಲು ಆಗಿಲ್ಲವಲ್ಲ ಎಂಬ ಬೇಸರದ ಭಾವನೆ ನನ್ನನ್ನು ಈಗಾಗಲೇ ಕಾಡುತ್ತಿದೆ ಎಂಬುದನ್ನು ನಿರ್ಮಲಾ ಸೀತಾರಾಮನ್ ಸಮಾರಂಭದ ನಂತರ ವಿಶೇಷ ಸಂದರ್ಶನವೊಂದರಲ್ಲಿ ತಿಳಿಸಿದರು.
ಈ ಕೊರತೆಯನ್ನು ನೀಗಿಸಲು ನವೋದ್ಯಮಗಳು ಮತ್ತು ಹೊಸ ಹೊಸ ಕಂಪನಿಗಳು ಕ್ಷಿಪಣಿ ಅಳವಡಿತ ಸುಸಜ್ಜಿತ ಡ್ರೋನ್‍ಗಳು ಅಥವಾ ಹಾರುವ ಯಂತ್ರಗಳನ್ನು ಅಭಿವೃದ್ದಿಗೊಳಿಸಬೇಕು. ಇದಕ್ಕೆ ಅಗತ್ಯವಾದ ಎಲ್ಲ ಸಹಕಾರವನ್ನು ಕೇಂದ್ರ ಸರ್ಕಾರ ನೀಡಲು ಸಿದ್ದ ಎಂದು ಅವರು ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್-ಇನ್-ಇಂಡಿಯಾ ಅಭಿಯಾನವನ್ನು ಗಮನದಲ್ಲಿಟ್ಟುಕೊಂಡು, ದೇಶದ ಭದ್ರತೆ ಮತ್ತು ಸುರಕ್ಷತೆಗಾಗಿ ಇಂಥ ಡ್ರೋನ್‍ಗಳನ್ನು ಅಭಿವೃದ್ದಿಗೊಳಿಸುವ ಸವಾಲುಗಳನ್ನು ಸ್ವೀಕರಿಸಿ ಅಭಿವೃದ್ದಿಗೊಳಿಸಬೇಕು ಎಂದು ನಾನು ನವೋದ್ಯಮಗಳನ್ನು ಒತ್ತಾಯಿಸುತ್ತಿದ್ದೇನೆ ಎಂದು ನಿರ್ಮಲಾ ಹೇಳಿದರು.
ಇಂಥ ಡ್ರೋನ್‍ಗಳ ಯೋಜನೆ ಮತ್ತು ಅಭಿವೃದ್ಧಿಯೊಂದಿಗೆ ಮುಂದೆ ಬರುವ ಎಲ್ಲ ನವೋದ್ಯಮ ಸಂಸ್ಥೆಗಳಿಗೆ ರಕ್ಷಣಾ ಸಚಿವಾಲಯದ ಬಾಗಿಲು ಸದಾ ತೆರೆದಿರುತ್ತದೆ. ಇಂಥ ನವೀನ ಪರಿಕಲ್ಪನೆಗಳಿಗೆ ಸಕಲ ನೆರವು ಮತ್ತು ಸಹಕಾರ ನೀಡಲು ತಾವು ಬದ್ಧ ಎಂದು ಅವರು ಆಶ್ವಾಸನೆ ನೀಡಿದರು.
ಭಾರತವು ತನ್ನ ಸಶಸ್ತ್ರ ಪಡೆಗಳಿಗೆ ಡ್ರೋನ್ ಸೇರಿದಂತೆ ಅಗತ್ಯವಾದ ಎಲ್ಲ ಅತ್ಯಾಧುನಿಕ ರಕ್ಷಣಾ ಸಾಧನಗಳನ್ನು ಅಮೆರಿಕ ಸೇರಿದಂತೆ ವಿವಿಧ ದೇಶಗಳಿಂದ ಹೊಂದಲು ಉತ್ಸುಕವಾಗಿದೆ. ಗಾರ್ಡಿಯನ್ ಮತ್ತು ಪ್ರೆಡಟರ್-ಬಿ ಡ್ರೋನ್‍ಗಳನ್ನು ಪಡೆಯುವ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ.
ಇಂಥ ಸಂದರ್ಭದಲ್ಲೇ ರಕ್ಷಣಾ ಸಚಿವರ ಈ ಹೇಳಿಕೆ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪ್ರಾಮುಖ್ಯತೆ ಪಡೆಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ