ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಕೇಂದ್ರ ಸರ್ಕಾರ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು

 

ಬೆಂಗಳೂರು, ಆ.5- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವಾಗ ಅದರ ಸಾಧಕ ಬಾಧಕಗಳನ್ನು ಸಂಬಂಧ ಪಟ್ಟವರೊಡನೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದು ಅವಶ್ಯಕ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅಧ್ಯಕ್ಷ ಬಸವರಾಜ್ ಎಸ್ ಜವಳಿ ತಿಳಿಸಿದ್ದಾರೆ.
ವಿಶ್ವದ ಜಾಗತಿಕ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಎಂ.ಎಸ್.ಎಂ.ಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ) ಗಳ ವೈe್ಞÁನಿಕ ವ್ಯಾಖ್ಯಾನದ ಬದಲಾವಣೆ ಅಗತ್ಯತೆಯನ್ನು ಕಾಸಿಯಾ ಪ್ರಶಂಶಿಸುತ್ತದೆ. ಆದರೆ ಎಂಎಸ್‍ಎಂಇ ಗಳನ್ನು ಜಾಗತಿಕವಾಗಿ ಉದ್ಯೋಗ ಮತ್ತು ವಹಿವಾಟಿನ ಆಧಾರದ ಮೇಲೆ ವರ್ಗೀಕರಿಸಲಾಗುತ್ತಿದೆ. ಘಟಕ ಸ್ಥಾಪನೆ ಮತ್ತು ಯಂತ್ರೋಪಕರಣಗಳ ಅಳವಡಿಕೆಗೆ ಮಾಡಿದ ಹೂಡಿಕೆ ಆಧರಿಸುವ ಬದಲಿಗೆ, ವಾರ್ಷಿಕ ವಹಿವಾಟು ಪರಿಗಣಿಸಿ ಎಂಎಸ್‍ಎಂಇ ಗಳನ್ನು ವರ್ಗೀಕರಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿರುವುದು ಸಮರ್ಪಕವಲ್ಲ ಎಂದು ಹೇಳಿದರು.
ಕೇಂದ್ರದ ಈ ಬದಲಾವಣೆ ಸಣ್ಣ ಉತ್ಪಾದನಾ ಘಟಕಗಳ ಅಸ್ತಿತ್ವ ಹಾಳುಮಾಡಬಹುದು. ಈ ನಿಟ್ಟಿನಲ್ಲಿ ಕಾಸಿಯಾ ಕೆಲವು ಸಲಹೆ ಸೂಚನೆಗಳನ್ನು ನೀಡಬಯಸುತ್ತದೆ ಎಂದರು.
ಪ್ರಸ್ತಾವಿತ ವ್ಯಾಖ್ಯಾನವು ಎಸ್‍ಎಂಇ ಯ ವ್ಯಾಖ್ಯಾನದೊಳಗೆ ದೊಡ್ಡ ಸಂಖ್ಯೆಯ ಸಂಸ್ಥೆಗಳಿಗೆ ತರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಕೈಗಾರಿಕೆಗಳನ್ನು ಗುರಿಯಿಟ್ಟುಕೊಳ್ಳುತ್ತದೆ. ಹಾಗಾಗಿ ಹೆಚ್ಚಿನ ವ್ಯವಹಾರಗಳಿಂದ ಎಸ್.ಎಂ.ಇ ಯ ಹಿತಾಸಕ್ತಿಗೆ ಹಾನಿಯಾಗಿ ಅವಲಂಬಿತ ಕುಟುಂಬಗಳು ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗುತ್ತದೆ. ಹೊಸ ವ್ಯಾಖ್ಯಾನದಲ್ಲಿ ಉತ್ಪಾದನೆ ಮತ್ತು ಸೇವೆಗಳ ನಡುವಿನ ವ್ಯತ್ಯಾಸ ತೆಗೆದುಹಾಕಲಾಗಿದೆ. ಇದರಿಂದ ಉತ್ಪಾದನೆ ಮೇಲೆ ಋಣಾತ್ಮಕ ಪ್ರಭಾವ ಬೀರಲಿದೆ.
ಎಸ್‍ಎಂಇ ಗಳು ಶೇ.20 ಸಾರ್ವಜನಿಕ ಸಂಗ್ರಹಣೆಯಲ್ಲಿ ಕಡ್ಡಾಯ ಪಾಲು ಹೊಂದಿದ್ದು, ಹಲವಾರು ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳೊಂದಿಗೆ ಋಣಾತ್ಮಕ ಪರಿಣಾಮ ಬೀರುತ್ತದೆ.
ಎಂಎಸ್‍ಎಂ ಗಳು ಹೂಡಿಕೆಯ ಆಧಾರದ ಮೇಲೆ ಪ್ರಸ್ತುತ ಅನುಸರಿಸುತ್ತಿರುವ ಎಂಎಸ್‍ಎಂಇ ಗಳ ವ್ಯಾಖ್ಯಾನವನ್ನು ಮುಂದುವರೆಸಿ ಸರ್ಕಾರ ವಸ್ತು ಸ್ಥಿತಿಯನ್ನು ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಹಣದುಬ್ಬರ ಮತ್ತು ಇತರ ನಿಯತಾಂಕಗಳನ್ನು ಪರಿಗಣಿಸಲು ಸರ್ಕಾರ ಹೂಡಿಕೆ ಮಿತಿ ಹೆಚ್ಚಿಸಬಹುದಾಗಿದೆ.
ಕಿರು ಉದ್ದಿಮೆಗೆ 25ಲಕ್ಷ , ಸಣ್ಣ ಉದ್ದಿಮೆಗೆ 25ಲಕ್ಷ ದಿಂದ 5ಕೋಟಿ, ಮಧ್ಯಮ ಉದ್ದಿಮೆಗೆ 5 ರಿಂದ 10 ಕೋಟಿ ಹೂಡಿಕೆಯನ್ನೇ ಮತ್ತೆ ಮುಂದುವರಿಸುವುದರಿಂದ ಸಣ್ಣ ಕೈಗಾರಿಕೋದ್ಯಮದ ಬೆಳವಣಿಗೆಗೆ ಪೂರಕವಾಗುತ್ತದೆ. ಈ ಕುರಿತು ದಕ್ಷಿಣ ರಾಜ್ಯದ ಎಲ್ಲಾ ಸಂಸದರಿಗೆ ಮನವಿ ಮಾಡಲಾಗಿದೆ.
ಪ್ರಸ್ತುತ ಘಟಕ ಸ್ಥಾಪನೆ ಮತ್ತು ಯಂತ್ರೋಪಕರಣಗಳ ಅಳವಡಿಕೆ ಹೂಡಿಕೆಯ ಆಧಾರದ ಮೇಲೆ ವ್ಯಾಖ್ಯಾನ ಉಳಿಸಿಕೊಳ್ಳಬೇಕಾಗಿದೆ ಮತ್ತು ಈ ವಿಷಯದಲ್ಲಿ ಎಂಎಸ್‍ಎಂಇ ಕಾಯಿದೆ 2006 ಕ್ಕೆ ಯಾವುದೇ ತಿದ್ದುಪಡಿ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ದೇಶದಲ್ಲಿ ಎಂಎಸ್‍ಎಂಇ ಗಳ ಉಳಿವಿಗೆ ಈ ವಿಷಯ ಬಹಳ ಪ್ರಮುಖವಾಗಿದೆ. ಈ ವ್ಯಾಖ್ಯಾನದಲ್ಲಿ ಯಾವುದೇ ಬದಲಾವಣೆ ತರುವ ಮೊದಲು ಸರ್ಕಾರ ಎಲ್ಲಾ ಪಾಲುದಾರ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಡನೆ ಪರಿಣಾಮ ಮತ್ತು ಸಾಧಕ ಬಾಧಕಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ