ಬೆಂಗಳೂರು, ಆ.5-ಯಾವುದೇ ಸಮುದಾಯ ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬಂದಾಗ ಮಾತ್ರ ಸಾಮಾಜಿಕವಾಗಿ ಸ್ಥಾನಮಾನ ಪಡೆಯಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹೇಳಿದರು.
ನಗರದಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘ ವತಿಯಿಂದ ಇಂದು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳು ಇನ್ನು ಮುಂದೆ ಬಾರದಿರುವುದರಿಂದ ಸಾಮಾಜಿಕ ನ್ಯಾಯದ ಉದ್ದೇಶ ಮತ್ತು ಪರಿಕಲ್ಪನೆ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಪ್ರತಿಭಾವಂತ ಯುವಕರು ಮತ್ತು ಮಕ್ಕಳನ್ನು ಗುರುತಿಸಿ ಪೆÇ್ರೀ ನೀಡಬೇಕು. ಯಾವ ಸಮುದಾಯ ಶಕ್ತಿಹೀನವಾಗಿದೆಯೋ ಅಂತಹ ಸಮುದಾಯವನ್ನು ಗುರುತಿಸಿ, ಉತ್ತೇಜಿಸಿ ಸಮಾಜದಲ್ಲಿ ಮುಂದೆ ಬರುವಂತೆ ಮಾಡಬೇಕು ಎಂದು ಕರೆ ನೀಡಿದರು.
ಯಾವುದೇ ಸಂಘ ಸಮುದಾಯ ಮುಂದೆ ಬರಲು ಹೋರಾಟ ಬಹಳ ಮುಖ್ಯ. ಹೋರಾಟ ಮಾಡಿದರೆ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯ. ಬದ್ಧತೆ, ಕಾಳಜಿ, ಕಳಕಳಿ ಇರಬೇಕು. ನಿಜವಾದ ನಂಬಿಕೆ ಸಾಮಾಜಿಕ ನ್ಯಾಯವನ್ನು ಒದಗಿಸುವಂತಹ ಕಾರ್ಯವನ್ನು ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರ ಮಾಡಿತ್ತು. ಈ ಸಮುದಾಯಕ್ಕೆ ಎಲ್ಲಾ ಬೆಂಬಲವನ್ನು ನೀಡಲಾಗಿತ್ತು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸದಸ್ಯ ಬಿ.ಡಿ.ಗೋಪಾಲ್ ಮಾತನಾಡಿ, ಯಾವುದೇ ಸಮುದಾಯಕ್ಕಾಗಲಿ ವಿದ್ಯಾಭ್ಯಾಸ ಅತಿ ಮುಖ್ಯ ಎಂದರು.
ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಈ ಹಿಂದೆಯೇ ಕೂಡಲ ಸಂಗಮದಲ್ಲಿ ಹೋರಾಟ ನಡೆಸಲಾಗಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಮನವಿ ಮಾಡಬೇಕೆಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಚಿವ ಬಂಡೆಪ್ಪ ಕಾಶಂಪುರ್, ಸಂಘದ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ಮಡಿವಾಳ ಸಂಘದ ಅಧ್ಯಕ್ಷ ಪಿ.ನಂಜಪ್ಪ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಸಮುದಾಯದ ಮುಖಂಡರಾದ ಡಿ.ಸಿ.ರಮೇಶ್, ಬಾಬುರಾವ್ ಮತ್ತಿತರರು ಉಪಸ್ಥಿತರಿದ್ದರು.