ವಾಷಿಂಗ್ಟನ್:ಆ-4: ಅಮೆರಿಕ, ತನ್ನ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಿದೆ. ಈ ಮೂಲಕ ಎಸ್ಟಿಎ-1(STA-1) ಸವಲತ್ತು ಪಡೆದ ಏಷ್ಯಾದ ಮೂರನೇ ರಾಷ್ಟ್ರ ಭಾರತವಾಗಿದೆ.
ಈ ಬಗ್ಗೆ ಅಮೆರಿಕ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಭಾರತಕ್ಕೆ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ವಹಿವಾಟು ನಡೆಸಬಲ್ಲ ವ್ಯೂಹಾತ್ಮಕ ವ್ಯಾಪಾರ-1 ಸ್ಥಾನಮಾನವನ್ನು ನೀಡಿದೆ. ಈ ಮೂಲಕ ನ್ಯಾಟೋ ದೇಶಗಳ ಹಾಗೆಯೇ ಭಾರತಕ್ಕೂ ಸಹ ಅಮೆರಿಕದ ಅತ್ಯುನ್ನತ ಮಿಲಿಟರಿ ಹಾಗೂ ನಾಗರಿಕ ತಂತ್ರಜ್ಞಾನಗಳು ಲಭಿಸಲಿವೆ. ದಕ್ಷಿಣ ಕೊರಿಯಾ ಹಾಗೂ ಜಪಾನ್ಗೆ ಈ ಮೊದಲು ಅಮೆರಿಕ ಎಸ್ ಟಿ ಎ ಸವಲತ್ತು ನೀಡಿತ್ತು. ಈಗ ಭಾರತ ಅಮೆರಿಕದ ಎಸ್ಟಿಎ-1 ಸ್ಥಾನಮಾನ ಪಡೆದ ಏಷ್ಯಾದ ಮೂರನೇ ರಾಷ್ಟ್ರವಾಗಿದ್ದು, ವಿಶ್ವದ 37ನೇ ದೇಶವಾಗಿದೆ.
ಎನ್ ಎಸ್ ಜಿ ಸದಸ್ಯ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಲು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಚೀನಾಗೆ ಈ ಮೂಲಕ ಡೊನಾಲ್ಡ್ ಟ್ರಂಪ್ ಸರ್ಕಾರ ತಿರುಗೇಟು ನೀಡಿದೆ. ಸಾಮಾನ್ಯವಾಗಿ, ಜಾಗತಿಕ ಮಟ್ಟದ ಪ್ರಮುಖ ರಫ್ತು ನಿಯಂತ್ರಣ ಒಕ್ಕೂಟಗಳಾದ ಎನ್ಎಸ್ಜಿ, ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಒಕ್ಕೂಟ, ವಾಸೆನಾರ್ ವ್ಯವಸ್ಥೆ ಹಾಗು ಆಸ್ಟ್ರೇಲಿಯಾ ಗುಂಪಿನ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಎಸ್ಟಿಎ-1 ಸದಸ್ಯತ್ವ ನೀಡುವ ಪರಿಪಾಠವನ್ನು ಅಮೆರಿಕ ಬೆಳೆಸಿಕೊಂಡಿದೆ. ತನ್ನ ನಿಕಟ ದೇಶ ಇಸ್ರೇಲ್ ಅನ್ನೂ ಕೂಡ ಹಿಂದಿಕ್ಕಿ ಭಾರತಕ್ಕೆ ಈ ಸ್ಥಾನಮಾನ ನೀಡಿರುವ ಅಮೆರಿಕ, ಚೀನಾಗೆ ಮಹತ್ವದ ರಾಜಕೀಯ ಸಂದೇಶ ರವಾನೆ ಮಾಡಿದೆ.
In Strong Message To China Over NSG, US Grants India This Special Status- Strategic Trade Authorization-1 (STA-1) list