ಬಿಇಎಂಎಲ್ ನಿಂದ ಡೀಸೆಲ್ ಎಲೆಕ್ಟ್ರಿಕಲ್ ಟವರ್ ಕಾರು ಅಭಿವೃದ್ಧಿ

 

ಬೆಂಗಳೂರು, ಆ.2- ಅತ್ಯಾಧುನಿಕ ಬಹುಪಯೋಗಿ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿರುವ ಭಾರತ್ ಅರ್ಥ್‍ಮೂವರ್ಸ್ ಲಿಮಿಟೆಡ್ (ಬಿಇಎಂಎಲ್)ಈಗ ಭಾರತೀಯ ರೈಲ್ವೆಗಾಗಿ 8 ಚಕ್ರಗಳ ಡೀಸೆಲ್ ಎಲೆಕ್ಟ್ರಿಕಲ್ ಟವರ್ ಕಾರನ್ನು ಅಭಿವೃದ್ಧಿಗೊಳಸಿದೆ.
ಬೆಂಗಳೂರಿನಲ್ಲಿ ಈ ಅತ್ಯಾಧುನಿಕ ವಾಹನವನ್ನು ಬಿಡುಗಡೆ ಮಾಡಲಾಗಿದೆ. ಹೊಸ 8ಡಬ್ಲ್ಯೂ ಡಿಇಡಿಸಿ ವಾಹನವನ್ನು ದೇಶೀಯ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದ್ದು, ಇದು ಬಿಇಎಂಎಲ್‍ನ ಮತ್ತೊಂದು ಪ್ರತಿಷ್ಠಿತ ಮತ್ತು ಹೆಮ್ಮೆಯ ಉತ್ಪನ್ನವಾಗಿದೆ. ಕೇಂದ್ರ ಸರ್ಕಾರದ ಮೇಕ್ ಇಂಡಿಯಾ ಯೋಜನೆಗೆ ಇದು ಪೂರಕವಾಗಿದೆ ಎಂದು ಈ ವಾಹನಕ್ಕೆ ಹಸಿರು ನಿಶಾನೆ ತೋರಿಸಿದ ವೇಳೆ ಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕೆ.ಹೋಟಾ ತಿಳಿಸಿದ್ದಾರೆ.
ಈ ಅತ್ಯಾಧುನಿಕ ವಾಹನವನ್ನು ರೈಲ್ವೆ ಹಳಿಗಳ ತಪಾಸಣೆ, ಕಣ್ಗಾವಲು ಮತ್ತು ನಿರ್ವಹಣೆಗೆ ಅತ್ಯಂತ ಸಮರ್ಪಕವಾಗಿ ಬಳಸಬಹುದಾಗಿದೆ. ಗಂಟೆಗೆ 110 ಕಿ.ಮೀ. ವೇಗದಲ್ಲಿ ಚಲಿಸುವ ಈ ವಿದ್ಯುತ್ ವಾಹನವು ಪರಿಸರ ಸ್ನೇಹಿಯಾಗಿದೆ.
ರೈಲ್ವೆ ಹಳಿಯ ಮೇಲೆ ನಿಗಾ ಇರಿಸಲು ಮತ್ತು ಅವುಗಳನ್ನು ತ್ವರಿತವಾಗಿ ದುರಸ್ತಿಗೊಳಿಸಲು ಈ ಅತ್ಯಾಧುನಿಕ ಸಾಧನ ನೆರವಾಗಲಿದೆ.
ಬಿಇಎಂಎಲ್ ಮೆಟ್ರೋ ಭೋಗಿ ತಯಾರಿಸುವ ಸಂಸ್ಥೆಯಾಗಿಯೂ ಮುಂಚೂಣಿಯಲ್ಲಿದ್ದು, ಇದೀಗ ರೈಲ್ವೆ ಇಲಾಖೆಗೂ ಅತ್ಯಾಧಿನಿಕ ಸಾಧನವೊಂದನ್ನು ಅಭಿವೃದ್ಧಿಪಡಿಸಿ ಗಮನ ಸೆಳೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ