ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

 

ಬೆಂಗಳೂರು,ಆ.2- ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರ ಮಹಾಮಂಡಳಿ ವತಿಯಿಂದ ಆ.16ರಂದು ಅಂಗನವಾಡಿ ಕಾರ್ಯಕರ್ತೆರು, ಸಹಾಯಕಿಯರ ಫಲಾನುಭವಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲಾ ಕಚೇರಿಗಳ ಮುಂದೆ ಹಾಗೂ ನಗರದ ಟೌನ್‍ಹಾಲ್ ಮುಂದೆ ಪ್ರತಿಭಟನೆ ನಡೆಸುವುದಾಗಿ ಮಹಾಮಂಡಳಿ ಅಧ್ಯಕ್ಷ ಜಿ.ಆರ್.ಶಿವಶಂಕರ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ಥಿತಿ ನಿರೀಕ್ಷೆಗೂ ಮೀರಿದಷ್ಟು ತೊಂದರೆಯಲ್ಲಿದ್ದು, ಬೀದಿಪಾಲಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ನಿವೃತ್ತಿಯಾದ ಈ ಮಹಿಳೆಯರಿಗೆ ಪಿಂಚಣಿ ಹಾಗು ವೈದ್ಯಕೀಯ ಸವಲತ್ತನ್ನು ಜಾರಿಗೆ ತರಬೇಕು, ಮಾತೃಪೂರ್ಣ ಯೋಜನೆ ಬಗ್ಗೆ ಸಮಗ್ರವಾಗಿ ಅಧ್ಯಯನ ಸಮೀಕ್ಷೆ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಫಲಾನುಭವಿಗಳ ಹಿತದೃಷ್ಟಿಯಿಂದ ಹಾಲಿ ಚಾಲ್ತಿಯಲ್ಲಿದ್ದ ಟೇಕ್ ಹೋಮ್‍ನ್ನು ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸಬೇಕು ಎಂದರು.
ಅಂಗನವಾಡಿ ಕೇಂದ್ರಗಳ ಕೆಲಸದ ವೇಳೆಯನ್ನು ಈ ಹಿಂದೆ ಇದ್ದ ಹಾಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರವರೆಗೆ ಸರ್ಕಾರ ಆದೇಶಿಸಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಸಹಾಯಕಿಯರನ್ನು ನೇಮಿಸುವುದಲ್ಲದೆ ಅಲ್ಲಿ ಕೆಲಸ ಮಾಡುವ ಕಾರ್ಯಕರ್ತೆಯರನ್ನು ಯೋಜನೆಯಲ್ಲಿ ಖಾಲಿಯಾದ ಸ್ಥಳದಲ್ಲಿ ನೇಮಿಸಬೇಕು. ರಾಜ್ಯದಲ್ಲಿ ನಿವೃತ್ತಿಯಾದ ಹಾಗೂ ನಿವೃತ್ತಿಯಾಗುತ್ತಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸರ್ಕಾರ ಹಿಂದೆ ನೀಡುತ್ತಿದ್ದ ರೀತಿ ಇಡಿಗಂಟು ಹಣವನ್ನು ಕೂಡಲೇ ನೀಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ