ಚೆನ್ನೈ: ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅವರು ಆಸ್ಪತ್ರೆಗೆ ದಾಖಲಾಗಿರುವ ಆಘಾತಕಾರಿ ಸುದ್ದಿ ಕೇಳಿ ಈವರೆಗೂ 21 ಮಂದಿ ಡಿಎಂಕೆ ಕಾರ್ಯಕರ್ತರು ಮೃತಪಟ್ಟಿದ್ದಾರೆ.
ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ ಅವರಿಗೆ 94 ವರ್ಷ ವಯಸ್ಸಾಗಿದ್ದು, ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮಿಳುನಾಡಿನ ಜನರು ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ ಡಿಎಂಕೆ ಪಕ್ಷದ ಕೆಲವು ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ.
ಕರುಣಾನಿಧಿ ಅವರು ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಪಕ್ಷದ 21 ಜನ ಕಾರ್ಯಕರ್ತರು ಮೃತಪಟ್ಟಿರುವ ಮಾಹಿತಿ ಕೇಳಿ ಆಘಾತವಾಗಿದೆ. ಅಭಿಮಾನಿಗಳು ಯಾವುದೇ ಅನಾಹುತಕ್ಕೆ ಮುಂದಾಗಬಾರದು ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ ಸ್ಟಾಲೀನ್ ಮನವಿ ಮಾಡಿಕೊಂಡಿದ್ದಾರೆ.
ಸಾವನ್ನಪ್ಪಿದ 21 ಮಂದಿ ಕಾರ್ಯಕರ್ತರ ಕುಟುಂಬಗಳಿಗೆ ಸ್ಟಾಲಿನ್ ಸಾಂತ್ವನ ಹೇಳಿದ್ದಾರೆ. ಇತ್ತ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಯ ಐಸಿಯುನಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಕಾವೇರಿ ಆಸ್ಪತ್ರೆಗೆ ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ನಟ ರಜನಿಕಾಂತ್, ತಮಿಳು ಭಾಷಾ ನಟ ವಿಜಯ್ ಸೇರಿದಂತೆ ಅನೇಕರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.