ಪ್ರತಿ ವಾರ್ಡ್‍ನಲ್ಲಿ ಜಿಮ್, ಗ್ರೂಪ್ ಆಫ್ ಹೌಸ್ ನಿರ್ಮಾಣ

 

ಬೆಂಗಳೂರು, ಆ.2- ಪ್ರತಿ ವಾರ್ಡ್‍ನಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಜಿಮ್ ಉಪಕರಣ ಅಳವಡಿಸುವುದು, 2 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಹಾಗೂ 2.27 ಕೋಟಿ ರೂ. ವೆಚ್ಚದಲ್ಲಿ ಗ್ರೂಪ್ ಆಫ್ ಹೌಸ್ ನಿರ್ಮಿಸಲು ಬಿಬಿಎಂಪಿ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ.
ವಾರ್ಡ್‍ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ನಡೆಸಿದ ಸಭೆಯಲ್ಲಿ ಜಿಮ್ ಕಟ್ಟಡ ಮತ್ತು ಜಿಮ್ ಸಾಮಗ್ರಿಗಳಿಲ್ಲದ ವಾರ್ಡ್‍ಗಳಲ್ಲಿ ಪಿಒಡಬ್ಲ್ಯೂ ಅನುದಾನದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಜಿಮ್ ಉಪಕರಣಗಳನ್ನು ಅಳವಡಿಸಿಕೊಳ್ಳಲು ಹಣ ಮೀಸಲಿರಿಸುವಂತೆ ತೀರ್ಮಾನಿಸಲಾಯಿತು.
ಅದೇ ರೀತಿ ಬಾಣಸವಾಡಿಯಲ್ಲಿ ಎಸ್‍ಎಫ್‍ಸಿ ಅನುದಾನದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸಹ ಸಮಿತಿ ಆಡಳಿತಾತ್ಮಕ ಅನುಮೋದನೆ ನೀಡಿತು.
ಮಲ್ಲೇಶ್ವರಂ ವಾರ್ಡ್ 45ರಲ್ಲಿ 2.27 ಕೋಟಿ ರೂ. ವೆಚ್ಚದಲ್ಲಿ ಗ್ರೂಪ್ ಆಫ್ ಹೌಸ್ ನಿರ್ಮಾಣ ಮಾಡಲು ಸಹ ಸಮಿತಿ ಅನುಮೋದನೆ ನೀಡಿದೆ. ಇದರಿಂದ ಸುಮಾರು ಬಡ ಕುಟುಂಬಗಳ ಸೂರು ಕಟ್ಟಿಕೊಳ್ಳುವ ಕನಸು ನನಸಾಗಲಿದೆ.
ನಾಗಪುರ ವಾರ್ಡ್ ಕಚೇರಿಯನ್ನು ನಿರ್ಮಿಸಲು 2.3 ಕೋಟಿ ಹಣ ನಿಗದಿಪಡಿಸಲು ಹಾಗೂ ಶ್ರೀರಾಂಪುರ ರೆಫರಲ್ ಆಸ್ಪತ್ರೆಯನ್ನು 15 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಗೊಳಿಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಹೇಮಲತಾ, ದೀಪಾ ನಾಗೇಶ್, ಶ್ವೇತಾ ವಿಜಯ್‍ಕುಮಾರ್, ಹೇಮಲತಾ ಸತೀಶ್, ಯಶೋಧಾ, ನೇತ್ರಾ ಪಲ್ಲವಿ, ಭುವನೇಶ್ವರಿ, ಸುಜಾತಾ, ಎಸ್.ಜಿ.ನಾಗರಾಜ್ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ