ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1989ರ ಕೆಲವು ಪ್ರಸ್ತಾವನೆಗಳನ್ನು ಬದಲಾಯಿಸಬೇಕೆಂಬ ಸುಪ್ರೀಂಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿ ಕೇಂದ್ರ ಸರಕಾರವು ಕಾಯಿದೆಯ ಹಳೆ ಕಾಯಿದೆಯನ್ನೇ ಮುಂದುವರಿಸಲು ನಿರ್ಧರಿಸಿದೆ. ಈ ಮೂಲಕ ಸುಪ್ರೀಂಕೋರ್ಟ್ ತೀರ್ಪಿನಿಂದ ಆಕ್ರೋಶಿತಗೊಂಡಿದ್ದ ದಲಿತ ಸಮುದಾಯವನ್ನು ಸಂತೈಸಲು ಮುಂದಾಗಿದೆ.
ಸುಪ್ರೀಂಕೋರ್ಟ್ ಮಾರ್ಚ್ 20ರಂದು ನೀಡಿದ ತೀರ್ಪಿನಲ್ಲಿ ದಲಿತ ದೌರ್ಜನ್ಯ ತಡೆ ಕಾಯಿದೆಯ ದುರುಪಯೋಗವಾಗುತ್ತಿದೆ ಎಂದು ಅಭಿಪ್ರಾಯಪಟ್ಟು, ಕೆಲವು ಪ್ರಸ್ತಾವನೆಗಳನ್ನು ಬದಲಿಸಿತ್ತು. ಇದು ಕಾಯಿದೆಯನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಆಕ್ಷೇಪಿಸಿದ ದಲಿತ ಸಮುದಾಯ ಏಪ್ರಿಲ್ 2ರಂದು ಆಯೋಜಿಸಿದ್ದ ಭಾರತ್ ಬಂದ್ನಲ್ಲಿ 12 ಮಂದಿ ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡಿದ್ದರು.
ಈ ನಡುವೆ, ಆಗಸ್ಟ್ 9ರಂದು ಅಂತಹುದೇ ಇನ್ನೊಂದು ಬಂದ್ಗೆ ಕರೆ ನೀಡಿದ್ದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸಚಿವ ಸಂಪುಟ ಹಳೆ ಕಾಯಿದೆಯನ್ನೇ ಮರುಸ್ಥಾಪಿಸುವ ವಿಧೇಯಕಕ್ಕೆ ಬುಧವಾರ ಒಪ್ಪಿಗೆ ನೀಡಿದೆ.
ಸುಪ್ರೀಂ ಹೇಳಿದ್ದೇನು?
* ದೂರು ಬಂದಿದೆ ಎಂಬ ಕಾರಣಕ್ಕೆ ತಕ್ಷಣವೇ ಬಂಧಿಸುವಂತಿಲ್ಲ, ಕಾರಣಗಳನ್ನು ತಿಳಿದುಕೊಳ್ಳಬೇಕು.
* ಅಧಿಕಾರಿಗಳ ಮೇಲೆ ದೌರ್ಜನ್ಯದ ಆರೋಪ ಬಂದಾಗ ಎಸ್ಪಿ ಮಟ್ಟದ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಕ್ರಮ ಕೈಗೊಳ್ಳುವಂತಿಲ್ಲ.
* ಮೇಲ್ನೋಟಕ್ಕೆ ಆರೋಪ ಸಾಬೀತಾಗದಿದ್ದರೆ ನಿರೀಕ್ಷಣಾ ಜಾಮೀನು ನಿರಾಕರಿಸುವಂತಿಲ್ಲ.
ಬದಲಾವಣೆ ಏನಾಗಲಿದೆ?
* ದೌರ್ಜನ್ಯದ ದೂರುಗಳು ಬಂದಾಗ ಪ್ರಾಥಮಿಕ ತನಿಖೆ ಇಲ್ಲದೆಯೇ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಬಹುದು.
* ಹಿರಿಯ ಅಧಿಕಾರಿಗಳ ಅನುಮತಿ ಅನಗತ್ಯ.
* ಕೋರ್ಟ್ಗಳು ನಿರೀಕ್ಷಣಾ ಜಾಮೀನು ನೀಡುವಂತಿಲ್ಲ.
ದಲಿತ ರಾಜಕೀಯದ ದಾಳ
ಆರಂಭಿಕ ಹಂತದಲ್ಲಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ನ ತೀರ್ಪನ್ನು ಒಪ್ಪಿಕೊಂಡಿತ್ತು. ವಿಪಕ್ಷ ಮತ್ತು ದಲಿತ ಸಮುದಾಯಗಳು ನಡೆಸಿದ ಪ್ರತಿಭಟನೆ, ಬಿಜೆಪಿ ಮಿತ್ರ ಪಕ್ಷವಾದ ರಾಮ್ವಿಲಾಸ್ ಪಾಸ್ವಾನ್ ಅವರ ಎಲ್ಜೆಪಿ, ಎನ್ಡಿಎನಲ್ಲಿರುವ ದಲಿತ ಮತ್ತು ಬುಡಕಟ್ಟು ಸಮುದಾಯಗಳ ಸಂಸದರ ಒತ್ತಡಕ್ಕೆ ಮಣಿದು ಕೇಂದ್ರ ಹೊಸ ತೀರ್ಮಾನ ಪ್ರಕಟಿಸಿದೆ.