ಡೊಕ್ಲಾಮ್ ಕುರಿತು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು: ಕಾಂಗ್ರೆಸ್

ನವದೆಹಲಿ: ಡೊಕ್ಲಾಮ್ ನಲ್ಲಿ ಚೀನಾ ಪಡೆಗಳ ನಿಯೋಜನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ಕಾಂಗ್ರೆಸ್ ಬುಧವಾರ ಆಗ್ರಹಿಸಿದೆ.
ಡೊಕ್ಲಾಮ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಪ್ರಮಖ ಅಂಶಗಳನ್ನು ಮುಚ್ಚಿಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಅವರು, ಡೊಕ್ಲಾಮ್ ವಿವಾದ ಕುರಿತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂಸತ್ತಿನಲ್ಲಿ ನೀಡರುವ ಹೇಳಿಕೆ ‘ಬಹಿರಂಗಪಡಿಸಿರುವುದಕ್ಕಿಂತ ಹೆಚ್ಚು ಮರೆಮಾಚುತ್ತಿದೆ’ ಎಂದಿದ್ದಾರೆ.
ರಾಷ್ಟ್ರದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರು ಡೊಕ್ಲಾಮ್ ಕುರಿತು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಮತ್ತು ಟ್ರೈಜಂಕ್ಷನ್ ಅನ್ನು ಸೇನಾಮುಕ್ತಗೊಳಿಸುವ ವಿಚಾರದಲ್ಲಿ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸುರ್ಜೆವಾಲಾ ಒತ್ತಾಯಿಸಿದ್ದಾರೆ.
ಚೀನಾದೊಂದಿಗೆ ದೀರ್ಘಕಾಲದಿಂದ ನಡೆದು ಬಂದಿದ್ದ ಡೊಕ್ಲಾಮ್ ವಿವಾದವನ್ನು ರಾಜತಾಂತ್ರಿಕ ನೀತಿಯಿಂದ ಸಂಪೂರ್ಣವಾಗಿ ಇತ್ಯರ್ಥಗೊಳಿಸಿದ್ದೇವೆ ಎಂದು ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ ಹೇಳಿದ್ದರು.
ಭಾರತ ಹಾಗೂ ಚೀನಾ ನಡುವಿನ ಗಡಿ ಪ್ರದೇಶವಾದ ಡೊಕ್ಲಾಮ್ ವಿವಾದವನ್ನು ರಾಜತಾಂತ್ರಿಕ ನೀತಿ ಅನುಸರಿಸಿ ಇತ್ಯರ್ಥಗೊಳಿಸಿದ್ದೇವೆ. ಇನ್ನುಮುಂದೆ ಡೊಕ್ಲಾಮ್ ನಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಸುಷ್ಮಾ ಸ್ವರಾಜ್ ಇಂದು ಲೋಕಸಭೆಗೆ ತಿಳಿಸಿದ್ದರು.
ಸುಷ್ಮಾ ಸ್ವರಾಜ್ ಅವರ ಹೇಳಿಕೆ ದಾರಿ ತಪ್ಪಿಸುವಂತಿದೆ ಮತ್ತು ಅವರು ದಕ್ಷಿಣ ಡೊಕ್ಲಾಮ್ ನಲ್ಲಿ ಚೀನಾ ಸೇನೆ ಉಪಸ್ಥಿತಿ ಬಗ್ಗೆ ದೊಡ್ಡ ಚಿತ್ರ ನೀಡಲು ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ