ಚಾರ್ಜ್‌ಗೆ ಹಾಕಿದ್ದ ಮೊಬೈಲ್ ಬ್ಲಾಸ್ಟ್‌; ಫೋನ್‌ನಲ್ಲಿ ಮಾತನಾಡುತ್ತಲೇ ದಿವ್ಯಾಂಗ ಸಾವು

ವಿಜಯವಾಡ: ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ಗೆ ಒಳಗಾಗಿ ಮೃತಪಟ್ಟಿದ್ದಾನೆ. ಫೋನ್‌ ಅನ್ನು ಚಾರ್ಜಿಂಗ್‌ಗೆ ಹಾಕಿದ್ದರೂ ಇದೇ ವೇಳೆಯಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಹೈ ವೋಲ್ಟೇಜ್‌ನಿಂದಾಗಿ ಸುಟ್ಟುಹೋಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕಣಿಗಿರಿ ಬಳಿಯ ವಾಗುಪಲ್ಲಿಯಲ್ಲಿ ಈ ಘಟನೆ ನಡೆದಿದೆ.

ಮೃತಪಟ್ಟವನನ್ನು ಚಂಗು ಮಸ್ತಾನ್ ರೆಡ್ಡಿ( 31 ) ಎಂದು ಗುರುತಿಸಲಾಗಿದೆ. ಈತ ತನ್ನ ಮನೆಯಲ್ಲಿ ಒಬ್ಬನೇ ವಾಸ ಮಾಡುತ್ತಿದ್ದ ಹಾಗೂ ದಿವ್ಯಾಂಗ ಎಂದು ಪೊಲೀಸರು ತಿಳಿಸಿದ್ದಾರೆ. ಎಲೆಕ್ಟ್ರಿಕ್‌ ವೈರ್‌ಗಳು ಸುಟ್ಟು ಹೋದ ವಾಸನೆಯನ್ನು ಪತ್ತೆ ಹಚ್ಚಿದ ನೆರೆ ಮನೆಯವರು ಸೋಮವಾರ ತಡ ರಾತ್ರಿ ಅಂಗವಿಕಲ ವ್ಯಕ್ತಿಯ ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಕಣಿಗಿರಿ ಎಸ್‌ಐ ಯು. ಶ್ರೀನಿವಾಸುಲು ಮಾಹಿತಿ ನೀಡಿದ್ದಾರೆ. ಎಡಗೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡಿದ್ದ ಮಸ್ತಾನ್ ರೆಡ್ಡಿಯ ಮೃತದೇಹ ನೆಲದ ಮೇಲೆ ಬಿದ್ದಿತ್ತು. ನಂತರ, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ, ಕೆಲವು ವರ್ಷಗಳ ಹಿಂದೆ ತನ್ನ ಪೋಷಕರನ್ನು ಕಳೆದುಕೊಂಡಿದ್ದ ಮಸ್ತಾನ್ ರೆಡ್ಡಿ ಮನೆಯಲ್ಲಿ ಒಬ್ಬನೇ ವಾಸ ಮಾಡುತ್ತಿದ್ದ. ಸರಕಾರ ಆತನಿಗೆ ಅಂಗವಿಕಲರ ಮಾಸಿಕ ವೇತನದಡಿ ನೀಡುತ್ತಿದ್ದ ಒಂದು ಸಾವಿರ ರೂ. ಯಲ್ಲಿ ಜೀವನ ನಿರ್ವಹಿಸುತ್ತಿದ್ದ ಎಂದು ನೆರೆಹೊರೆಯವರು ಮಾಹಿತಿ ನೀಡಿದ್ದಾರೆ.
ಇನ್ನು, ಘಟನೆಗೆ ಕಾರಣವಾದ ಮೊಬೈಲ್ ಫೋನ್ ಯಾವುದು ಎಂದು ಪೊಲೀಸರಿಗೆ ತಿಳಿದುಬಂದಿಲ್ಲ. ಫೋನ್ ಸಂಪೂರ್ಣ ಸುಟ್ಟು ಹೋಗಿದ್ದು, ಅದನ್ನು ಕಂಡುಹಿಡಿಯುವುದು ಬಹುತೇಕ ಅಸಾಧ್ಯವಾಗಿದೆ. ಆದರೆ, ಫೋನ್ ಹಿಂಬದಿಯಲ್ಲಿ ಸ್ಯಾಮ್ಸಂಗ್‌ನ ಕವರ್‌ ಇತ್ತು. ಅಲ್ಲದೆ, ಅದು ನೋಕಿಯಾದ ಹಳೆಯ ಕೀ ಪ್ಯಾಡ್ ಫೋನ್ ರೀತಿ ಇತ್ತು. ಹೀಗಾಗಿ ಅದು ಸ್ಮಾರ್ಟ್ ಫೋನ್ ಅಲ್ಲ ಎಂದು ಕಣಿಗಿರಿಯ ಇನ್ಸ್‌ಪೆಕ್ಟರ್‌ ಎಂ. ಸುಬ್ಬರಾವ್ ತಿಳಿಸಿದ್ದಾರೆ.

ಇನ್ನು, ಹೈ ವೋಲ್ಟೇಜ್‌ನಿಂದಾಗಿ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಗ್ರಾಮದಲ್ಲಿ ಇದೇ ಕಾರಣದಿಂದಾಗಿ ಕೆಲವು ಫ್ಯಾನ್‌ಗಳು ಕೆಟ್ಟು ಹೋಗಿರುವ ಘಟನೆಗಳು ಸಹ ವರದಿಯಾಗಿದೆ. ಇನ್ನು, ಈ ಘಟನೆಗೆ ಸಂಬಂಧಪಟ್ಟಂತೆ ಸೆಕ್ಷನ್‌ 174 ಸಿಆರ್‌ಪಿಸಿ ಅಡಿ ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಆಂಧ್ರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ