ಬೆಂಗಳೂರು:ಜು-31: ಬೆಂಗಳೂರು ನಗರ ವಾಯುಮಾಲಿನ್ಯದಲ್ಲಿ ಟಾಪ್ ೧೦ ಪಟ್ಟಿಯಲ್ಲಿ ಇಲ್ಲದೆ ಇದ್ದರೂ, ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕಾನೂನು ತರುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಸಿ-40 ಸಿಟಿ ಗ್ಲೋಬಲ್ ಏರ್ ಕ್ವಾಲಿಟಿ ಫೋರಮ್ ಹಾಗೂ ಬಿಬಿಎಂಪಿ ವತಿಯಿಂದ ಮಂಗಳವಾರ ಐಟಿಸಿ ಗಾರ್ಡೇನಿಯಾ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಸಭೆ ಹಾಗೂ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ೩೦ ವರ್ಷದಲ್ಲಿ ಇಡೀ ಪ್ರಪಂಚದ ಚಿತ್ರಣ ಬದಲಾಗಿದೆ. ಜಾಗತೀಕರಣದ ಬಳಿಕ ಸಾಕಷ್ಟು ಅಭಿವೃದ್ಧಿ ಕಂಡಿದ್ದೇವೆ. ಇದರೊಟ್ಟಿಗೆ ಪರಿಸರ, ವಾಯು ಮಾಲಿನ್ಯ ಮಿತಿ ಮೀರಿದೆ. ಭಾರತದಲ್ಲಿ ಮಾಲಿನ್ಯ ಪ್ರಮಾಣ 60 ಯುನಿಟ್ ಮೀರಿರಬಾರದು. ಆದರೆ, ದೆಹಲಿ 292, ಫರಿದಾಬಾದ್ 272, ವಾರಣಾಸಿ 262 ಯುನಿಟ್ ಇದೆ. ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಮಾಲಿನ್ಯದಿಂದ ಈ ರಾಜ್ಯಗಳು ಮಾಲಿನ್ಯದ ಸಮಸ್ಯೆ ಎದುರಿಸುತ್ತಿವೆ. ಸಂತಸದ ವಿಚಾರವೆಂದರೆ ಬೆಂಗಳೂರು ಟಾಪ್ ೧೦ ಮಾಲಿನ್ಯ ಪಟ್ಟಿ ನಗರದಲ್ಲಿ ಇಲ್ಲ. ೬೦-೭೦ ಪ್ರಮಾಣದಲ್ಲಿ ಮಾತ್ರ ಬೆಂಗಳೂರು ಇದೆ. ಹಾಗೆಂದು, ಮಾಲಿನ್ಯದಲ್ಲಿ ಸುರಕ್ಷತಾ ನಗರದ ಪಟ್ಟಿಯಲ್ಲೂ ಇಲ್ಲದಿರುವುದು ಆತಂಕದ ಸಂಗತಿ.
೬೦ ಯುನಿಟ್ ನೊಳಗೆ ಇರುವ ನಗರಗಳ ಪೈಕಿ ಮಂಡ್ಯ, ಮಂಗಳೂರು, ಭದ್ರಾವತಿ ಕೂಡ ಇದೆ. ಈ ನಗರದಲ್ಲಿ ಮಾಲಿನ್ಯ ಸಮತಟ್ಟಾಗಿದೆ.
ಬೆಂಗಳೂರುನಗರ ಕಳೆದ ೧೦ ವರ್ಷದಲ್ಲಿ ಸಾಕಷ್ಟು ಬೆಳೆದಿದೆ. ಶೇ.23ರಷ್ಟಿದ್ದ ಜನಸಂಖ್ಯೆ ,ಈಗ 36 %ಗೆ ಹೆಚ್ಚಳವಾಗಿದೆ. ಇದರೊಂದಿಗೆ ನಗರದ ಮೂಲಸೌಕರ್ಯ ಕೂಡ ಹೆಚ್ಚಿಸಿದ್ದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ.
ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನ ಸುತ್ತಲೂ ಮರಗಳೇ ಕಾಣುತ್ತಿದ್ದವು. ಸ್ವಚ್ಛಂದ ವಾತಾವರಣವಿತ್ತು. ಉಷ್ಣಾಂಶ ಗರಿಷ್ಟವೆಂದರೆ ಶೇ.27 ಇರುತ್ತಿತ್ತು. ಸಾಮಾನ್ಯವಾಗಿ ಶೇ.23 ರಷ್ಟು ಇರುತ್ತದೆ.ಇದರಿಂದ ಇತರೆ ಜಿಲ್ಲೆ, ರಾಜ್ಯಗಳಿಂದ ಜನರು ಇಲ್ಲಿಗೆ ನೆಮ್ಮದಿಯಿಂದ ಜೀವನ ನಡೆಸಲು ಬರುತ್ತಿದ್ದರು.
ಈ 10 ವರ್ಷದ ಬಳಿಕ ಸಾಕಷ್ಟು ಬದಲಾಗಿದೆ. ಜನರ ವಲಸೆಯಿಂದ ಜನಸಂಖ್ಯೆ ಇಂದು 1.3 ಕೋಟಿ ಇದೆ. ನಿತ್ಯ 72 ಲಕ್ಷ ವಾಹನ ಸಂಚರಿಸುತ್ತಿವೆ. ಇದರಿಂದ ಮೂಲಸೌಕರ್ಯ ಹೆಚ್ಚಿಸುವ ಭರದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಇದನ್ನು ನಿಯಂತ್ರಿಸುವ ಅಗತ್ಯವಿದೆ. ಇಲ್ಲದಿದ್ದರೆ ಸಮಸ್ಯೆ ಕಟ್ಟಿಟ್ಟಬುತ್ತಿ ಎಂದರು.
ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕಾನೂನು ತರುವ ಅಗತ್ಯವಿದೆ. ಜನರಿಗೆ ಜಾಗೃತಿ ಮೂಡಿಸಬೇಕಿದೆ. ಇಂದು ನಿಯಂತ್ರಣ ಮಾಡದಿದ್ದರೆ ಮುಂದೆ ದೊಡ್ಡ ಗಂಡಾಂತರವನ್ನು ನಾವೇ ಅನುಭವಿಸಬೇಕು. ಶಾಲೆಗಳಲ್ಲಿಯೇ ಜಾಗೃತಿ ಮೂಡಿಸು ಕೆಲಸ ಮಾಡಿಸಬೇಕು.
ಟ್ರಾಫಿಕ್ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಯೋಜನೆ ಹಾಕಿಕೊಂಡಿದ್ದೇವೆ. ಈ ಮೂಲಕವೂ ಕೂಡ ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ಒಟ್ಟಾರೆ, ಶಾಂತಿಯುತ ಹಾಗೂ ಮಾಲಿನ್ಯ ಮುಕ್ತ ನಗರವನ್ನು ನಾವೆಲ್ಲಾ ನಿರ್ಮಿಸಬೇಕು.
ಈ ನಿಟ್ಟಿನಲ್ಲಿ ಸಿ-40 ಸಿಟಿ ಅವರು ಈ ವಿಚಾರಗೋಷ್ಠಿ ನಡೆಸುತ್ತಿರುವುದು ಪ್ರಸ್ತುತವಾಗಿದೆ. ಉತ್ತಮ ಚರ್ಚೆ ಬಳಿಕ ಇದನ್ನು ಸರಕಾರಕ್ಕೆ ಮಾಹಿತಿ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಸಂಪತ್ ರಾಜ್, ಉಪಮೇಯರ್ ಪದ್ಮಾವತಿ, ಶಾಲಿನಿ ರಜನೀಶ್ ಇದ್ದರು.