
ಹೊಸದಿಲ್ಲಿ: ಅಸ್ಸಾಂ ರಾಜ್ಯದಲ್ಲಿರುವ ಅಕ್ರಮ ವಿದೇಶಿ ವಲಸಿಗರನ್ನು ಗುರುತಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ಆದೇಶದನ್ವಯ ಕಾನೂನುಬದ್ಧ ಅಸ್ಸಾಂ ನಾಗರಿಕರ ಪರಿಷ್ಕೃತ ರಿಜಿಸ್ಟರ್ ಕರಡನ್ನು ಸೋಮವಾರ ಎನ್ ಆರ್ ಸಿ(ರಾಷ್ಟ್ರೀಯ ಪೌರತ್ವ ನೋಂದಣಿ) ಬಿಡುಗಡೆ ಮಾಡಿದೆ.
ಎನ್ ಆರ್ ಸಿ ಪ್ರಕಾರ, ಅಸ್ಸಾಂನಲ್ಲಿ ಒಟ್ಟು 3,29, 91, 384 ಜನರು ರಾಷ್ಟ್ರೀಯ ಪೌರತ್ವ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 2,89,83,677 ಮಂದಿ ಕಾನೂನುಬದ್ಧ ಪ್ರಜೆಗಳಾಗಿದ್ದಾರೆ ಎಂದು ತಿಳಿಸಿದೆ. ಇದರಲ್ಲಿ 40 ಲಕ್ಷಕ್ಕೂ ಅಧಿಕ ಜನರು ಅಕ್ರಮ ವಲಸಿಗ ಪ್ರಜೆಗಳಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ನಾಗರಿಕರ ನೋಂದಣಿಯನ್ನು ಮಾಡಿಸಲಾಗಿತ್ತು ಎಂದು ಮಾಧ್ಯಮದ ವರದಿ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಎಆರ್ ಸಿ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲಿ ಅಸ್ಸಾಂನಲ್ಲಿ ಒಟ್ಟು 3.29 ಕೋಟಿ ಜನರು ತಮ್ಮ ಪೌರತ್ವ ಸಾಬೀತುಪಡಿಸಲು ದಾಖಲೆ ಸಲ್ಲಿಸಿದ್ದರು. ಅಂತಿಮ ಕರಡಿನಲ್ಲಿ 2.09 ಕೋಟಿ ಜನರು ಅಧಿಕೃತ ಪೌರತ್ವ ಹೊಂದಿರುವುದಾಗಿ ತಿಳಿಸಿದೆ.
ಇದರಲ್ಲಿ 40.07 ಲಕ್ಷ ಜನರು ತಾವು ಅಸ್ಸಾಂ ನಾಗರಿಕರು ಎಂಬ ಬಗ್ಗೆ ಸೂಕ್ತ ದಾಖಲೆ ಇಲ್ಲ. ಆದರೆ ಇದು ಅಂತಿಮ ಕರಡು ವಿನಃ, ಅಂತಿಮ ಪಟ್ಟಿಯಲ್ಲ. ಯಾರ ಹೆಸರು ಪಟ್ಟಿಯಲ್ಲಿ ಇಲ್ಲ ಅವರು ಇನ್ನೂ ಹೆಸರನ್ನು ಸೇರಿಸಬಹುದಾಗಿದೆ.
ಎನ್ ಆರ್ ಸಿಯ ಸೈಲೇಶ್ ಅವರು ಸೋಮವಾರ ಗುವಾಹಟಿಯಲ್ಲಿ ಅಂತಿಮ ಕರಡನ್ನು ಬಿಡುಗಡೆಗೊಳಿಸಿದ್ದರು. ಇದೇನು ಅಂತಿಮವಲ್ಲ. ಯಾರ ಹೆಸರು ಪಟ್ಟಿಯಲ್ಲಿ ಇಲ್ಲವೋ ಅಥವಾ ಯಾವುದಾದರು ಆಕ್ಷೇಪಣೆ ಸಲ್ಲಿಸುವುದಿದ್ದರೆ ಸಲ್ಲಿಸಬಹುದು ಎಂದು ಸೈಲೇಶ್ ತಿಳಿಸಿದ್ದಾರೆ.