ಮರ್ಟಿನ್‌ ಗಪ್ಟಿಲ್‌ ಶರವೇಗದ ಶತಕ

ಲಂಡನ್‌: ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌(102), ಇಲ್ಲಿ ನಡೆಯುತ್ತಿರುವ ಇಂಗ್ಲಿಷ್‌ ಕೌಂಟಿ ಟಿ20 ಬ್ಲಾಸ್ಟ್‌ ಕ್ರಿಕೆಟ್‌ ಟೂರ್ನಿಯಲ್ಲಿ ಕೇವಲ 35 ಎಸೆಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

31 ವರ್ಷದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಟಿನ್‌ ತಮ್ಮ ಸಿಡಿಲಬ್ಬರದ ಶತಕದ ಬಲದಿಂದ ವೋಸ್ರ್ಟರ್‌ಶೈರ್‌ ತಂಡಕ್ಕೆ ನಾರ್ತ್‌ಹ್ಯಾಂಪ್ಟನ್‌ಶೈರ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. ಈ ಮೂಲಕ ಟಿ20 ಕ್ರಿಕೆಟ್‌ ಇತಿಹಾಸದಲ್ಲಿನ 5ನೇ ಅತ್ಯಂತ ವೇಗದ ಶತಕದ ದಾಖಲೆಯನ್ನೂ ಕಿವೀಸ್‌ ಬ್ಯಾಟ್ಸ್‌ಮನ್‌ ಸರಿಗಟ್ಟಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನಾರ್ತ್‌ಹ್ಯಾಂಪ್ಟನ್‌ಶೈರ್‌ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 187 ರನ್‌ಗಳ ಸವಾಲಿನ ಮೊತ್ತವನ್ನೇ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ವೋಸ್ರ್ಟರ್‌ಶೈರ್‌ ಇನ್ನೂ 41 ಎಸೆತಗಳು ಬಾಕಿ ಇರುವಂತೆಯೇ 189 ರನ್‌ಗಳನ್ನು ದಾಖಲಿಸಿ ಭರ್ಜರಿ ಜಯ ದಾಖಲಿಸಿತು.

ಗಪ್ಟಿಲ್‌ 38 ಎಸೆತಗಳಲ್ಲಿ 12 ಫೋರ್‌ ಮತ್ತು 7 ಸಿಕ್ಸರ್‌ ಒಳಗೊಂಡ 102 ರನ್‌ಗಳನ್ನು ಸಿಡಿಸಿ ಔಟಾದರೆ, ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಜೋ ಕ್ಲಾರ್ಕ್‌ 33 ಎಸೆತಗಳಲ್ಲಿ ತಲಾ 4 ಫೋರ್‌ ಮತ್ತು ಸಿಕ್ಸರ್‌ಗಳೊಂದಿಗೆ ಅಜೇಯ 61 ರನ್‌ ದಾಖಲಿಸಿ ತಂಡಕ್ಕೆ ಸುಲಭ ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್‌

ನಾರ್ತ್‌ಹ್ಯಾಂಪ್ಟನ್‌ಶೈರ್‌: 20 ಓವರ್‌ಗಳಲ್ಲಿ 187/9 (ರಿಚರ್ಡ್‌ ಲೆವಿ 39, ಸ್ಟೀವನ್‌ ಕ್ರೂಕ್‌ 33; ಪ್ಯಾಟ್ರಿಕ್‌ ಬ್ರೌನ್‌ 31ಕ್ಕೆ 3).

ವೋಸ್ರ್ಟರ್‌ಶೈರ್‌: 13.1 ಓವರ್‌ಗಳಲ್ಲಿ 189/1 (ಗಪ್ಟಿಲ್‌ 102, ಕ್ಲಾರ್ಕ್‌ ಅಜೇಯ 61; ರಿಚರ್ಡ್‌ ಗ್ಲೀಸನ್‌ 37ಕ್ಕೆ 1).

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ