ಫೇಸ್‌ಬುಕ್‌ ಮತ್ತು ಟ್ವಿಟರ್‌ಗೆ ಸಂಕಷ್ಟದ ಕಾಲ

ನ್ಯೂಯಾರ್ಕ್‌: ವಿಶ್ವ ವಿಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಹಾಗೂ ಟ್ವಿಟರ್‌, ಇದೀಗ ಒಂದರ ಮೇಲೊಂದರಂತೆ ಬಿಕ್ಕಟ್ಟು ಎದುರಿಸುತ್ತಿವೆ. ಕುಸಿಯುತ್ತಿರುವ ಗ್ರಾಹಕರ ಸಂಖ್ಯೆ, ಷೇರು ದರದ ಭಾರಿ ಕುಸಿತ, ಸುಳ್ಳು ಸುದ್ದಿ ಪ್ರಸಾರ, ಬಳಕೆದಾರರ ಮಾಹಿತಿ ಸೋರಿಕೆ, ದುರ್ಬಳಕೆ ಆರೋಪ, ಷೇರುದಾರರ ಒತ್ತಡ, ಡಜನುಗಟ್ಟಲೆ ಕೋರ್ಟ್‌ ಕೇಸ್‌ ಮುಂತಾದ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿವೆ.

ಫೇಸ್‌ಬುಕ್‌ ಸ್ಥಾಪಕ ಹಾಗೂ ಸಿಇಒ ಜುಕರ್‌ಬರ್ಗ್‌ ವಿರುದ್ಧ ಷೇರುದಾರರೇ ಮೊಕದ್ದಮೆ ದಾಖಲಿಸಿದ್ದು, ಇತರ ಹೂಡಿಕೆದಾರರ ಒತ್ತಡ ಹೆಚ್ಚುತ್ತಿದೆ. ಇವೆಲ್ಲದರ ಪರಿಣಾಮ ಜಾಲತಾಣ ಕಂಪನಿಗಳು ತಮ್ಮ ಆದಾಯವೂ ಭಾರಿ ಕುಸಿಯುವ ಆತಂಕದಲ್ಲಿದ್ದು, ಅವುಗಳ ಭವಿಷ್ಯ ಅನಿಶ್ಚಿತವಾಗಿದೆ.

ಜುಕರ್‌ ಬರ್ಗ್‌ ವಿರುದ್ಧ ಷೇರುದಾರರ ಕೇಸ್‌:
ಫೇಸ್‌ಬುಕ್‌ ಕಳೆದ ಬುಧವಾರ ಪ್ರಕಟಿಸಿದ ಏಪ್ರಿಲ್‌-ಜೂನ್‌ ತ್ರೈಮಾಸಿಕ ಫಲಿತಾಂಶ ಹೂಡಿಕೆದಾರರನ್ನು ನಿರಾಶೆಗೊಳಿಸಿದೆ. ಆದಾಯ ಕುಸಿತದ ಎಚ್ಚರಿಕೆಯ ಪರಿಣಾಮ ಷೇರು ದರ ಶೇ. 20ಕ್ಕೂ ಹೆಚ್ಚು ಕುಸಿಯಿತು. ಇದರಿಂದ ಕಂಗಾಲಾಗಿದ್ದ ಷೇರುದಾರರು ಇದೀಗ ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ವಿರುದ್ಧ ತಿರುಗಿ ಬಿದ್ದಿದ್ದು, ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಷೇರುದಾರ ಜೇಮ್ಸ್‌ ಕ್ಯೂರಿಯಸ್‌ ಎಂಬುವರು ಮ್ಯಾನ್‌ಹಟನ್‌ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಜುಕರ್‌ಬರ್ಗ್‌ ಕಂಪನಿಯ ಬಗ್ಗೆ ದಿಕ್ಕುತಪ್ಪಿಸುವಂಥ ಹೇಳಿಕೆಗಳನ್ನು ನೀಡಿದ್ದು, ಇದರಿಂದ ಷೇರುದಾರರಿಗೆ ಭಾರಿ ನಷ್ಟವಾಗಿದೆ. ಇದಕ್ಕಾಗಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಫೇಸ್‌ಬುಕ್‌ ಡಜನುಗಟ್ಟಲೆ ಕೇಸ್‌ಗಳನ್ನು ಎದುರಿಸುತ್ತಿದ್ದು, ಕೇಂಬ್ರಿಡ್ಜ್‌ ಅನಾಲಿಟಿಕಾ ಕಂಪನಿಯ ಜತೆಗಿನ ವ್ಯವಹಾರದಲ್ಲಿ ತನ್ನ ಬಳಕೆದಾರರ ದತ್ತಾಂಶಗಳ ನಿರ್ವಹಣೆಯಲ್ಲಿ ಲೋಪವೆಸಗಿರುವ ಪ್ರಕರಣವನ್ನೂ ಎದುರಿಸುತ್ತಿದೆ. ಪೆಪ್ಸಿ ಕಂಪನಿಯು ತನ್ನ ಕುರ್‌ಕುರೆ ಉತ್ಪನ್ನದಲ್ಲಿ ಪ್ಲಾಸ್ಟಿಕ್‌ ಅಂಶ ಇದೆ ಎಂದು ಸುಳ್ಳು ಸಂದೇಶಗಳು ಪ್ರಚಾರವಾಗುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳ ವಿರುದ್ಧ ಗರಂ ಆಗಿದ್ದು, ಕೋರ್ಟ್‌ ಮೆಟ್ಟಿಲೇರಿದೆ. ಅದು ಫೇಸ್‌ಬುಕ್‌, ಟ್ವಿಟರ್‌, ಯೂಟ್ಯೂಬ್‌ ಸೇರಿದಂತೆ ಜಾಲತಾಣಗಳ ವಿರುದ್ಧ ಕಾನೂನು ಸಮರ ಸಾರಿದೆ.

ಟ್ವಿಟರ್‌ ಷೇರು ದರ ಶೇ. 20 ಕುಸಿತ:
ಟ್ವಿಟರ್‌ ಕಳೆದ ಶುಕ್ರವಾರ ಷೇರು ದರದಲ್ಲಿ ಶೇ. 20ರಷ್ಟು ಕುಸಿತಕ್ಕೀಡಾಗಿದೆ. ಮಾರುಕಟ್ಟೆ ಮೌಲ್ಯದಲ್ಲಿ 500 ಕೋಟಿ ಡಾಲರ್‌ ಕರಗಿದೆ. ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಟ್ವಿಟರ್‌ 10 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಕಳೆದುಕೊಂಡಿದೆ.

ಫೇಸ್‌ಬುಕ್‌, ಟ್ವಿಟರ್‌ಗೆ ಯಾವುದು ಅಪಾಯಕಾರಿ?
ಬದಲಾದ ಸ್ಥಿತಿಗತಿ:
ವಿಶ್ವಾದ್ಯಂತ ಬಳಕೆದಾರರು ಇರುವುದರಿಂದ ಜಾಲತಾಣಗಳು ಹೊಸ ಬಗೆಯ ಸವಾಲುಗಳನ್ನು ಎದುರಿಸುತ್ತಿವೆ. ಹೇಗೆ ಎದುರಿಸುವುದು ಎಂಬುದೂ ಗೊಂದಲಮಯವಾಗಿದ್ದು, ಸಮಸ್ಯೆ ಸೃಷ್ಟಿಸಿದೆ.

ಟ್ರೋಲಿಂಗ್‌ ಹಾವಳಿ:
ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ, ದ್ವೇಷ ಬಿತ್ತುವ ಸಂದೇಶಗಳ ಟ್ರೋಲಿಂಗ್‌ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಇದು ಜಾಲತಾಣಗಳಿಗೆ ತೀವ್ರ ತಲೆನೋವಾಗಿದೆ.

ವೈರಲ್‌:
ಜಾಲತಾಣಗಳಲ್ಲಿ ಕೆಲವೇ ಸೆಕೆಂಡ್‌ಗಳಲ್ಲಿ ಸುದ್ದಿ, ಪೋಸ್ಟ್‌ ವೈರಲ್‌ ಆಗುತ್ತದೆ. ಏನೇನೋ ಅನಾಹುತಕ್ಕೂ ಇದು ಕಾರಣವಾಗುತ್ತವೆ. ಹಾಕಿದ ಪೋಸ್ಟ್‌ ಪರಿಣಾಮ ಏನಾಗುತ್ತದೆ ಎಂದು ಮೊದಲೇ ಹೇಳಲಾಗದು. ಯಾವುದೋ ರೂಪ ಪಡೆಯುತ್ತವೆ. ನೀವು ಯಾವುದೋ ಪೋಸ್ಟ್‌ ಪ್ರಕಟಿಸುತ್ತೀರಿ. ಅದು ವಿವಾದವಾಗಬಹುದು ಎಂಬ ಅರಿವಾದೊಡನೆ ಡಿಲೀಟ್‌ ಮಾಡಿದರೂ, ಅಷ್ಟರೊಳಗೆ ಯಾರೋ ಡೌನ್‌ಲೋಡ್‌ ಮಾಡಿ, ಪ್ರಸಾರ ಮಾಡಬಹುದು. ಇಂಥ ಸಂದರ್ಭದಲ್ಲಿ ಕಂಪನಿಯ ಹೊಣೆಗಾರಿಕೆ ಏನು ಎಂಬುದು ಈಗಲೂ ಸ್ಪಷ್ಟವಾಗಿಲ್ಲ. ಇದರಿಂದ ಬಳಕೆದಾರರು, ಕಂಪನಿ ಇಬ್ಬರೂ ಸಮಸ್ಯೆಗೀಡಾಗಬಹುದು.

ಫೇಸ್‌ಬುಕ್‌ನ ಒಟ್ಟು ಬಳಕೆದಾರರ ಸಂಖ್ಯೆ 105 ಕೋಟಿ,
ಭಾರತದಲ್ಲಿ ಫೇಸ್‌ಬುಕ್‌ ಗ್ರಾಹಕರು 27 ಕೋಟಿ,
ಟ್ವಿಟರ್‌ ಬಳಕೆದಾರರ ಸಂಖ್ಯೆ 33.6 ಕೋಟಿ,
ಭಾರತದಲ್ಲಿ ಟ್ವಿಟರ್‌ ಬಳಕೆದಾರರು 3.44 ಕೋಟಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ