ಹೊಸದಿಲ್ಲಿ: ಕೇಂದ್ರ ಸರ್ಕಾರದ ನೌಕಕರಿಗೆ ಒಂದು ಸಿಹಿ ಸುದ್ದಿ ಇದೆ. ಸರ್ಕಾರವೇ ನಿಮ್ಮನ್ನು ವಿದೇಶಕ್ಕೆ ಕಳುಹಿಸಲು ಚಿಂತನೆ ನಡೆಸುತ್ತಿದೆ.
ಕೇಂದ್ರ ಸರ್ಕಾರಿ ನೌಕರರು ವಿದೇಶಕ್ಕೆ ತೆರಳಲು ಅಧಿಕೃತ ಅವಕಾಶ ನೀಡುವಂತಹ ಲೀವ್ ಟ್ರಾವೆಲ್ ಕನ್ಸೆಷನ್ (ಎಲ್ಟಿಸಿ) ಪ್ರಸ್ತಾವನೆಯು ಸದ್ಯ ಸಿಬ್ಬಂದಿ ಇಲಾಖೆಯ ಮುಂದಿದೆ. ಇಲಾಖೆಯು ಗೃಹ, ಪ್ರವಾಸೋದ್ಯಮ, ನಾಗರಿಕ ವಾಯುಯಾನ ಸಚಿವಾಲಯದ ಪ್ರತಿಕ್ರಿಯೆಯನ್ನು ಕೇಳಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಅರ್ಹ ಸರ್ಕಾರಿ ನೌಕಕರಿಗೆ ರಜೆ ಹಾಗೂ ಪ್ರಯಾಣ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ.
ಅಂದಹಾಗೆ, ಏಷಿಯಾದ ರಾಷ್ಟ್ರಗಳಾದ ಕಝಕಿಸ್ತಾನ್, ತುರ್ಕಿಮೆನಿಸ್ತಾನ್, ಉಝ್ಬೇಕಿಸ್ತಾನ್, ಕಿರ್ಗಿಸ್ತಾನ್ ಹಾಗೂ ತಜಿಕಿಸ್ತಾನ್ಗಳಿಗೆ ಮಾತ್ರ ತೆರಳಲು ಅವಕಾಶ ನೀಡಲು ವಿದೇಶಾಂಗ ಇಲಾಖೆಯು ಈಗಾಗಲೇ ಚರ್ಚೆ ನಡೆಸಿದೆ.
ಈ ಮೂಲಕ ಸಾರ್ಕ್ (ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಸಹಕಾರಿ ಒಕ್ಕೂಟ) ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಸುವ ಗುರಿಯೂ ಇದೆ. ಆದರೆ ಇದು ಎಷ್ಟರಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬುದನ್ನು ಪರೀಕ್ಷಿಸಿ, ಜಾರಿಗೊಳಿಸಲಾಗುತ್ತದೆ ಎಂದು ಸಿಬ್ಬಂದಿ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸದ್ಯ 48.41 ಲಕ್ಷ ಕೇಂದ್ರ ಸರ್ಕಾರಿ ನೌಕಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.