ಬೀಜಿಂಗ್, ಜು.28-ಚೀನಾದ ಗುಯಾಂಗ್ ನಗರದಲ್ಲಿ ಮುಗಿಲಚುಂಬಿ ಕಟ್ಟಡವೊಂದರ ಮೇಲೆ ವಿಶ್ವದ ಬೃಹತ್ ಕೃತಕ ಜಲಪಾತವೊಂದು ನಿರ್ಮಾಣವಾಗಿದೆ..! ಅತ್ಯಾಧುನಿಕ ವಿನ್ಯಾಸದ ಕಟ್ಟಡದಲ್ಲಿ ದೊಡ್ಡ ಜಲಧಾರೆಯ ಈ ವಾಸ್ತು ವಿನ್ಯಾಸ ಎಲ್ಲರನ್ನು ಬೆರಗುಗೊಳಿಸಿದೆ.
121 ಮೀಟರ್ಗಳಷ್ಟು ಎತ್ತರದ ಲೀಬಿಯನ್ ಇಂಟರ್ನ್ಯಾಷನಲ್ ಟವರ್ ಕಟ್ಟಡದ ಮೇಲ್ಭಾಗದಿಂದ 305 ಅಡಿಗಳಷ್ಟು ಎತ್ತರದಿಂದ ಈ ಕೃತಕ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು ಜನಾಕರ್ಷಕಣೆಗೆ ಪಾತ್ರವಾಗಿದೆ.
ಚೀನಾದ ಪ್ರಸಿದ್ಧ ಕಟ್ಟಡ ನಿರ್ಮಾಣ ಸಂಸ್ಥೆ ಲೂಡಿ ಇಂಡಸ್ಟ್ರಿ ಗ್ರೂಪ್ನ ವಾಸ್ತುಶಿಲ್ಪಿಗಳು ಈ ಕಟ್ಟಡ ಮತ್ತು ಕೃತಕ ಜಲಪಾತದ ರೂವಾರಿಗಳು. ಈ ಕಟ್ಟಡದಲ್ಲಿ ದೊಡ್ಡ ಶಾಪಿಂಗ್ ಮಾಲ್, ಪಂಚತಾರಾ ಹೋಟೆಲ್ ಹಾಗೂ ಕಚೇರಿಗಳಿವೆ. ಬೃಹತ್ ಕಟ್ಡಡದ ಒಂದು ಪಾಶ್ರ್ವದಲ್ಲಿ ನಿರ್ಮಿಸಿರುವ ಕೃತಕ ಜಲಪಾತವನ್ನು ಪಂಪ್ ಮಾಡಿ ಜಲಧಾರೆಯನ್ನು ಪುನರಾವರ್ತಿಸಲು ನಾಲ್ಕು ಬೃಹತ್ ಪಂಪ್ಗಳನ್ನು ಅಳವಡಿಸಲಾಗಿದೆ.
ಕೃತಕ ಜಲಪಾತ ಇರುವ ವಿಶೇಷ ವಿನ್ಯಾಸ ಗಗನಚುಂಬಿ ಕಟ್ಟಡ ನಿರ್ಮಿಸುವಾಗ ತಂತ್ರಶಿಲ್ಪಿಗಳು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಈ ಜಲಪಾತದಿಂದ ನೀರು ಧುಮ್ಮಕ್ಕುವಂತೆ ಮಾಡಲು ಒಂದು ಗಂಟೆಗೆ 120 ಡಾಲರ್ (ಸುಮಾರು 8,100 ರೂ.ಗಳಾಗುತ್ತವೆ. ದುಬಾರಿ ವೆಚ್ಚವಾಗುವ ಹಿನ್ನೆಲೆಯಲ್ಲಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇದನ್ನು ಬಳಸಲು ಉದ್ದೇಶಿಸಲಾಗಿದೆ.