ಭಾರೀ ಮಳೆ ಕನಿಷ್ಠ 27 ಮಂದಿ ಸಾವು

ಲಕ್ನೋ, ಜು.28-ಉತ್ತರ ಪ್ರದೇಶದ ವಿವಿಧೆಡೆ ಭಾರೀ ಮಳೆಯಿಂದಾಗಿ ಕನಿಷ್ಠ 27 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ವರುಣನ ಆರ್ಭಟದಿಂದ ಕೆಲವು ಮನೆಗಳು ಕುಸಿದಿವೆ, ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಉತ್ತರ ಪ್ರದೇಶದ ವಿವಿಧೆಡೆ ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆ ಇಂದು ಕೂಡ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರದಿಂದಲೂ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಬಿರುಮಳೆ ಮತ್ತು ಅದರಿಂದ ಉಂಟಾದ ದುರ್ಘಟನೆಗಳಲ್ಲಿ ಈವರೆಗೆ 27 ಮಂದಿ ಬಲಿಯಾಗಿದ್ದಾರೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗ್ರಾ, ಮೈನ್‍ಪುರಿ, ಮುಝಫರ್‍ನರ್, ಕಾಸ್‍ಗಂಜ್, ಮೀರತ್, ಬರೇಲಿ, ಕಾನ್ಪುರ್, ಮಥುರಾ, ಗಾಝಿಯಾಬಾದ್, ಹಪುರ್, ಝಾನ್ಸಿ, ರಾಯ್ ಬರೇಳಿ, ಜಲೌನ್ ಮತ್ತು ಜಾನ್‍ಪುರ್‍ಗಳಲ್ಲಿ ಮಳೆಯಿಂದ ಸಾವು-ನೋವು ಸಂಭವಿಸಿದೆ.
ರಕ್ಷಣಾ ಕಾರ್ಯಕರ್ತರು ಸಮರೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.
ದೆಹಲಿಯಲ್ಲಿ ಕಟ್ಟೆಚ್ಚರ: ರಾಜಧಾನಿ ದೆಹಲಿ ಮತ್ತು ಸುತ್ತುಮುತ್ತ ಪ್ರದೇಶಗಳಲ್ಲಿ ನಿರಂತರ ಭಾರೀ ಮಳೆಯಿಂದಾಗಿ ಬಹುತೇಕ ಪ್ರದೇಶಗಳು ಭಾಗಶಃ ಜಲಾವೃತವಾಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಯಮುನಾ ನದಿ ಪ್ರವಾಹದಿಂದ ಭೋರ್ಗರೆಯುತ್ತಿದ್ದು, ಅಪಾಯದ ಮಟ್ಟ ತಲುಪಿದೆ. ಸಂಭವನೀಯ ಪ್ರಕೃತಿ ವಿಕೋಪ ತಡೆಗಟ್ಟಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ