ಕ್ಯಾಲಿಫೋರ್ನಿಯಾ ಕಾಡ್ಗಿಚ್ಚು: 500 ಮನೆಗಳು ನಾಶ; ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವು

ರೆಡ್ಡಿಂಗ್‌(ಅಮೆರಿಕ):ಜು-೨೮: ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಮುಂದುವರೆದಿದ್ದು, ಈಗಾಗಲೇ 500ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿವೆ ಎಂದು ಅಗ್ನಿಶಾಮಕ ದಳ ತಿಳಿಸಿದೆ. ಅಗ್ನಿಶಾಮಕ ಸಿಬ್ಬಂದಿಗಳಿಬ್ಬರು ಬೆಂಕಿಗೆ ಆಹುತಿಯಾಗಿದ್ದಾರೆ.

ಇನ್ನೂ 5000 ಕಟ್ಟಡಗಳಿಗೆ ಅಪಾಯವಾಗುವ ಸಾಧ್ಯತೆಯಿದೆ. ಒಣ ಹವೆ ಮತ್ತು ಬೀಸುತ್ತಿರುವ ಗಾಳಿಯು ಬೆಂಕಿಯನ್ನು ದೂರದವರೆಗೂ ಹರಡುವಂತೆ ಮಾಡುತ್ತಿದ್ದು, ಕಾಡ್ಗಿಚ್ಚಿನ ಪ್ರಭಾವಕ್ಕೆ ಸಿಲುಕಿರುವ ಮನೆಗಳ ಸಂಖ್ಯೆಯಲ್ಲಿ ಏರಿಕೆಯಾಗುವ ಆತಂಕ ಸೃಷ್ಟಿಯಾಗಿದೆ.

ವಾಹನವೊಂದರಲ್ಲಿ ಯಾಂತ್ರಿಕ ಸಮಸ್ಯೆಯಿಂದಾಗಿ ಸೋಮವಾರ ಹೊತ್ತಿಕೊಂಡ ಬೆಂಕಿ, ಒಣ ಮರ, ಕಾಡುಗಳಲ್ಲಿ ಅತಿ ಬೇಗ ವಿಸ್ತರಿಸಿದೆ. ಶಾಸ್ತಾ ಪ್ರಾಂತ್ಯವನ್ನು ದಾಟಿ ಗುರುವಾರ ರಾತ್ರಿ ರೆಡ್ಡಿಂಗ್‌ ನಗರದ ವರೆಗೂ ತಲುಪಿದೆ. ಒಂದೇ ರಾತ್ರಿಯಲ್ಲಿ ಬೆಂಕಿ 194 ಚದರ ಕಿಲೋಮೀಟರ್‌ ಪ್ರದೇಶವನ್ನು ಸುಟ್ಟುಕರಕಲಾಗಿಸಿದೆ.

ಕಾಡ್ಗಿಚ್ಚು ಶಮನಗೊಳಿಸಲು ಅಗ್ನಿಶಾಮಕ ದಳ ನಿರಂತರ ಪ್ರಯತ್ನದಲ್ಲಿದೆ. ಈ ನಡುವೆ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಇಬ್ಬರು ಅಗ್ನಿಶಾಮಕ ಸಿಬ್ಬಂದಿ(ಫೈರ್‌ಫೈಟರ್‌) ಮೃತಪಟ್ಟಿದ್ದಾರೆ. ಬೆಂಕಿಗೆ ಆಹುತಿಯಾಗುವ ಭಯದಲ್ಲಿ ಈಗಾಗಲೇ ಸಾವಿರಾರು ಜನರು ಊರು ತೊರೆದು ಸುರಕ್ಷಿತ ಸ್ಥಳಗಳಗಳತ್ತ ಸಾಗುತ್ತಿದ್ದಾರೆ.

Northern California,wildfire kills two, destroys homes in Redding

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ