ಕೃಷ್ಣ ಮಠದ ವಿರುದ್ಧ ಮಾನಹಾನಿ ವರದಿ ಪ್ರಸಾರಕ್ಕೆ ಕೋರ್ಟ್ ತಡೆ

ಉಡುಪಿ: ಶ್ರೀಕೃಷ್ಣ ಮಠ ಹಾಗೂ ಉಡುಪಿ ಅಷ್ಟ ಮಠಗಳ ವಿರುದ್ಧ ಅವಮಾನಕರ ರೀತಿಯಲ್ಲಿ ದೃಶ್ಯ ಮಾಧ್ಯಮವೊಂದು ವರದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ವರದಿ ಪ್ರಸಾರಕ್ಕೆ ನ್ಯಾಯಾಲಯದಿಂದ ತಡೆ ದೊರೆತಿದೆ.

ಈ ಕುರಿತಂತೆ ತಡೆಯಾಜ್ಞೆ ನೀಡಿರುವ ಉಡುಪಿ 3ನೆಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ(ಕಿರಿಯ ವಿಭಾಗ), ಈ ಪ್ರಕರಣದಲ್ಲಿ 14 ದೃಶ್ಯ ಮಾಧ್ಯಮಗಳು ವರದಿ ಪ್ರಸಾರ ಮಾಡುವಂತಿಲ್ಲ ಎಂದು ಆದೇಶಿಸಿದೆ.

ಪ್ರಕರಣ ಕುರಿತಂತೆ ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮ್ ಪ್ರಶಾಂತ್, ಶೀರೂರು ಶ್ರಿಗಳ ವಿಷಯದಲ್ಲಿ ಕೃಷ್ಣ ಮಠ ಹಾಗೂ ಅಷ್ಟ ಮಠಾಧೀಶರ ವಿರುದ್ಧ 3 ಸ್ಥಳೀಯ ಸುದ್ದಿವಾಹಿನಿಗಳ ಸಹಿತ ರಾಜ್ಯದ 14 ದೃಶ್ಯ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಮಾನಹಾನಿ ದೃಶ್ಯ ಮತ್ತು ಸುದ್ದಿಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಆದೇಶ ನೀಡಿದ್ದಾರೆ.

ಶೀರೂರು ಸ್ವಾಮಿಗಳ ಅಸಹಜ ಸಾವಿನ ಬಳಿಕ ಹಲವು ದೃಶ್ಯ ಮಾಧ್ಯಮಗಳಲ್ಲಿ ಅಷ್ಟ ಮಠದ ಸ್ವಾಮೀಜಿಗಳ ವಿರುದ್ದ ಅವಹೇಳನಕಾರಿ ಸುದ್ದಿಗಳನ್ನು ಪ್ರಕಟ ಮಾಡಲಾಯಿತು. ಇದರ ವಿರುದ್ದ ತುಳು ಶಿವಳ್ಳಿ ಮಾಧ್ವಬ್ರಾಹ್ಮಣ ಮಹಾಮಂಡಲ ಉಡುಪಿ ಘಟಕ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದೆ.

ತುಶಿಮಾಮ ಅಧ್ಯಕ್ಷ ಕೆ. ಅರವಿಂದ ಆಚಾರ್ಯ, ಕಾರ್ಯದರ್ಶಿ ರವಿಪ್ರಕಾಶ್ ಭಟ್, ಕೋಶಾಧಿಕಾರಿ ಉದ್ಯಾವರ ವಾದಿರಾಜ ಆಚಾರ್ಯ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದು, ನ್ಯಾಯವಾದಿ ಪ್ರದೀಪ್ ಕುಮಾರ್ ವಾದಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ