ಬೆಂಗಳೂರು, ಜು.27- ಲಾರಿ ಮಾಲೀಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪದೇ ಪದೇ ನಡೆಸುವ ಮುಷ್ಕರದಿಂದ ಜನ ಸಾಮಾನ್ಯರು ಹೈರಾಣಾಗಿದ್ದಾರೆ. ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ಮುಚ್ಚುವ ಹಂತ ತಲುಪಿವೆ.
ಮುಷ್ಕರ ಕೈ ಬಿಡದ ಲಾರಿ ಮಾಲೀಕರು, ಬೇಡಿಕೆ ಈಡೇರಿಸದ ಸರ್ಕಾರದ ಹಗ್ಗಜಗ್ಗಾಟದ ನಡುವೆ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.
ಸಹಸ್ರಾರು ಸಣ್ಣ ಮತ್ತು ಅತಿಸಣ್ಣ ಕೈಗಾರಿಕಾ ಕ್ಷೇತ್ರದ ಮೇಲೂ ಪ್ರತಿಭಟನೆ ಪರಿಣಾಮ ಬೀರಿದರೂ ಕೈಗಾರಿಕೆಗಳ ಸಂಘಟನೆಯವರೂ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಕೈಗಾರಿಕೋದ್ಯಮ ಏನಾಗುತ್ತಿದೆ ? ಎತ್ತ ಸಾಗುತ್ತಿದೆ ? ಕಾರ್ಮಿಕರ ಗತಿ ಏನು ಎಂಬ ಬಗ್ಗೆ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಘಟನೆ ಯೋಚಿಸದೆ ತನ್ನ ಪಾಡಿಗೆ ತಾನಿದೆ.
ಸಾವಿರಾರು ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ತಲುಪಿದ್ದರೂ ಸಂಘಟನೆ ಕೈಕಟ್ಟಿ ಕುಳಿತಿದೆ. ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸುವ, ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನವನ್ನು ಸಂಘಟನೆಯ ಯಾವೊಬ್ಬ ಮುಖಂಡರೂ ಮಾಡದಿರುವುದು ದುರದೃಷ್ಟಕರ.
ರಾಜ್ಯದಲ್ಲಿ ಸಹಸ್ರಾರು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಇದ್ದು, ಲಕ್ಷಾಂತರ ಮಂದಿ ಇದನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ವಾರಗಟ್ಟಲೆ ಲಾರಿ ಮುಷ್ಕರ ನಡೆಯುತ್ತಿದ್ದು, ಸರಕು-ಸಾಗಾಣಿಕೆ, ಕಚ್ಚಾ ಪದಾರ್ಥಗಳು, ಕೈಗಾರಿಕೆಗಳಿಗೆ ಅಗತ್ಯವಾದ ವಸ್ತುಗಳು ಸರಬರಾಜಾಗದ ಹಿನ್ನೆಲೆಯಲ್ಲಿ ಸಣ್ಣ ಕೈಗಾರಿಕೆಗಳ ಪರಿಸ್ಥಿತಿ ಅರೋಹರ ಎಂಬಂತಾಗಿದೆ.
ಗಾರ್ಮೆಂಟ್ಸ್ಗಳನ್ನು ನಂಬಿ ಲಕ್ಷಾಂತರ ಮಹಿಳೆಯರು ಜೀವನ ನಡೆಸುತ್ತಿದ್ದಾರೆ. ಲಾರಿ ಮುಷ್ಕರದಿಂದ ಗಾರ್ಮೆಂಟ್ಸ್ಗಳಿಗೆ ಅಗತ್ಯ ಬಟ್ಟೆ, ವಿವಿಧ ಕಚ್ಛಾವಸ್ತುಗಳು ಸರಬರಾಜಗದ ಹಿನ್ನೆಲೆಯಲ್ಲಿ ಮಹಿಳೆಯರು ಕೆಲಸವಿಲ್ಲದೆ ಪರಿತಪಿಸುವಂತಾಗಿದೆ.
ನೋಟು ಅಮಾನೀಕರಣ, ಜಿಎಸ್ಟಿಯಿಂದ ಜರ್ಝರಿತವಾಗಿದ್ದ ಕೈಗಾರಿಕೋದ್ಯಮ, ಅನಿರ್ದಿಷ್ಟಾವಧಿ ಲಾರಿ ಮುಷ್ಕರದಿಂದ ತತ್ತರಿಸಿಹೋಗಿವೆ. ಲಾರಿ ಮಾಲೀಕರನ್ನು ಹೇಳುವವರು, ಕೇಳುವವರೇ ಇಲ್ಲವೇನೋ ಎಂಬ ಪರಿಸ್ಥಿತಿ ಉದ್ಭವಿಸಿದೆ.
ಅವರ ಬೇಡಿಕೆಗಳನ್ನು ಸರ್ಕಾರದ ಮುಂದೆ ಚರ್ಚಿಸಿ ಈಡೇರಿಸಿಕೊಳ್ಳಬಹುದು. ಆದರೆ, ಈ ರೀತಿ ಪದೇ ಪದೇ ಪ್ರತಿಭಟನೆ ನಡೆಸಿ ಜನ ಸಾಮಾನ್ಯರಿಗೆ ತೊಂದರೆ ಕೊಡುವುದು ಎಷ್ಟು ಸಮಂಜಸ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
ಲಾರಿ ಚಾಲಕರು, ಕ್ಲೀನರ್ಗಳು, ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಅಮಾಲಿಗಳು, ಲಕ್ಷಾಂತರ ಜನ ಲಾರಿ ಮುಷ್ಕರದಿಂದ ಅತಂತ್ರರಾಗಿದ್ದಾರೆ. ಲಾರಿ ಮಾಲೀಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈ ಉದ್ಯಮವನ್ನು ನಂಬಿ ಬದುಕುತ್ತಿರುವವರ ಗತಿ ಏನು ಎಂಬುದನ್ನು ಯೋಚಿಸುವ ವ್ಯವದಾನ ಇವರಿಗಿಲ್ಲವೆ ?
ಒಂದು ದಿನ ಲಾರಿ ಮುಷ್ಕರ ನಡೆದರೆ 20 ಸಾವಿರ ಕೋಟಿ ರೂ.ಗೂ ಹೆಚ್ಚು ವಹಿವಾಟು ಸ್ಥಗಿತಗೊಳ್ಳುತ್ತದೆ. ದೇಶದ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬೀಳುತ್ತದೆ. ಆಡಳಿತಾತ್ಮಕ ನಿರ್ಧಾರಗಳನ್ನು ಪ್ರತಿಭಟನೆಯ ಬೆದರಿಕೆಗಳಿಂದ ತೆಗೆದುಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಮರಳು ಲಾರಿಗಳ ಮುಷ್ಕರ, ಡೀಸೆಲ್ ಟ್ಯಾಂಕರ್ಗಳ ಮುಷ್ಕರ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಲಾರಿಗಳವರು ಮುಷ್ಕರ ನಡೆಸುತ್ತಲೇ ಬರುತ್ತಿದ್ದಾರೆ. ಇವರ ಬೇಡಿಕೆಗಳಿಗೆ ಜನರ ಬದುಕು ಬರ್ಬಾದಾಗುತ್ತಿದೆ.
ಒಂದು, ಎರಡು ದಿನ ಪ್ರತಿಭಟನೆ ನಡೆಸಿದರೆ ಪರವಾಗಿಲ್ಲ. ಆದರೆ, ವಾರಗಟ್ಟಲೆ ಪ್ರತಿಭಟನೆ ನಡೆಸಿದರೆ ಜನಸಾಮಾನ್ಯರ ಪಾಡೇನು ? ಪ್ರತೀ ದಿನ ಸಾಲ ಪಡೆದು ವ್ಯಾಪಾರ, ವಹಿವಾಟು ನಡೆಸುವವರ ಗತಿ ಏನು ? ರಾಜ್ಯದ ಆರೂವರೆ ಲಕ್ಷ ಲಾರಿಗಳು ಸೇರಿದಂತೆ 90 ಲಕ್ಷ ಲಾರಿಗಳು ರಸ್ತೆಗಿಳಿಯದೆ ಪ್ರತಿಭಟನೆ ನಡೆಸುತ್ತಿವೆ.
ಈ ಉದ್ಯಮವನ್ನು ನಂಬಿಕೊಂಡ ಕೋಟ್ಯಂತರ ಜನರ ಬದುಕು ಬೀದಿ ಪಾಲಾಗಿದೆ. ಸರ್ಕಾರವಾಗಲಿ, ಲಾರಿ ಮಾಲೀಕರ ಸಂಘದವರಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ತಮ್ಮ ಪ್ರತಿಷ್ಠೆಯನ್ನೇ ಮುಂದಿಟ್ಟುಕೊಂಡು ಪ್ರತಿಭಟನೆ ಮುಂದುವರೆಸಿದ್ದಾರೆ.