ಹುತಾತ್ಮ ರಕ್ಷಣಾ ಸಿಬ್ಬಂದಿಯ ಅರ್ಜಿಗಳನ್ನು 15 ದಿನಗಳಲ್ಲಿ ಇತ್ಯರ್ಥ ಪಡಿಸಲು ಸೂಚನೆ

ಬೆಂಗಳೂರು, ಜು.27- ದೇಶದ ರಕ್ಷಣೆಯ ಸಲುವಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿರುವ ರಕ್ಷಣಾ ಸಿಬ್ಬಂದಿಯ ನೇರ ಅವಲಂಬಿತರು ಜಮೀನು/ನಿವೇಶನ ಅಥವಾ ಆರ್ಥಿಕ ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಇನ್ನು 15 ದಿನಗಳಲ್ಲಿ ಇತ್ಯರ್ಥ ಪಡಿಸಬೇಕೆಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರï ವಿ ದೇಶಪಾಂಡೆ ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚಿಸಿದ್ದಾರೆ.

ಇಂತಹ ಅರ್ಜಿಗಳು ಇತ್ಯರ್ಥ ಕಾಣದೆ, ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ, ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವುದನ್ನು ಶ್ಲಾಘಿಸಿರುವ ಸಚಿವರು, ಈ ಕಾಲಮಿತಿಯನ್ನು ವಿಧಿಸಿದ್ದಾರೆ.

ಜತೆಗೆ, ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಬಾಕಿ ಇವೆಯೋ ಅವುಗಳನ್ನು ಪರಿಶೀಲಿಸಿ ಪ್ರಕರಣದ ವಸ್ತುಸ್ಥಿತಿ, ಅದು ಎಷ್ಟು ಕಾಲದಿಂದ ಬಾಕಿ ಇದೆ, ಮತ್ತು ಬಾಕಿ ಇರಲು ಕಾರಣವಾಗಿರುವ ಅಂಶಗಳೇನು ಎಂಬ ಬಗ್ಗೆ ಸಮಗ್ರ ವಿವರಗಳನ್ನುಳ್ಳ ವರದಿಯನ್ನು ತುರ್ತಾಗಿ ತಮಗೆ ಸಲ್ಲಿಸುವಂತೆಯೂ ಸಚಿವರು ಹೇಳಿದ್ದಾರೆ.

ಅಲ್ಲದೆ, ಜುಲೈ 30 ಮತ್ತು 31ರಂದು ನಡೆಯಲಿರುವ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ವಿಚಾರದ ಬಗ್ಗೆ ಗಮನ ಹರಿಸಲಾಗುವುದು ಎಂದು ಸಚಿವ ದೇಶಪಾಂಡೆ ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ