ಬೆಂಗಳೂರು: ಕಷ್ಟ ಅಂದರೆ ಏನು ಅನ್ನೋದು ನನಗೆ ಗೊತ್ತಾಗಿದೆ ಎಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಪಶ್ಚಾತ್ತಾಪದ ಮಾತುಗಳನ್ನು ಆಡಿದ್ದಾನೆ.
ಈ ಘಟನೆ ನಡೆದ ನಂತರ ಮೊದಲ ಬಾರಿಗೆ ಶಾಂತಿನಗರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ನಲಪಾಡ್ ತನ್ನ ನೋವು ತೋಡಿಕೊಂಡಿದ್ದಾನೆ. ಮೊದಲ ಬಾರಿಗೆ ವೇದಿಕೆ ಮೇಲೆ ಮಾತನಾಡುತ್ತಿದ್ದೇನೆ. ಈ 4 ತಿಂಗಳಲ್ಲಿ ನನ್ನ ಕುಟುಂಬ, ನನ್ನ ಮನೆಯವರು ನೀವೆಲ್ಲರು ಪಟ್ಟ ಕಷ್ಟಕ್ಕಿಂತ ಒಂದು ವ್ಯಕ್ತಿ ಜಾಸ್ತಿ ಕಷ್ಟ ಪಟ್ಟಿದ್ದಾರೆ. ಅವರು ನನ್ನ ತಾತ. ಎಲ್ಲರಿಗಿಂತ ಜಾಸ್ತಿ ನನಗೆ ನನ್ನ ತಾತನ ಮೇಲೆ ಪ್ರೀತಿ. ಅವರಿಗೂ ಕೂಡ ನಾನೆಂದರೆ ತುಂಬಾನೇ ಇಷ್ಟ. ಆದರೆ ಅವರ ಮೊಮ್ಮಗನಾಗಿ, ಒಬ್ಬ ಮಗನಾಗಿ ಇಲ್ಲಿಯವರೆಗೂ ನಾನು ಫೇಲ್ ಆಗಿದ್ದೇನೆ. ಇನ್ನು ಮುಂದೆ ಒಂದು ಒಳ್ಳೆಯ ಮಗ, ಮೊಮ್ಮಗನಾಗಿ ಇರುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದಿದ್ದಾನೆ.
ಈ 4 ತಿಂಗಳಲ್ಲಿ ಕಷ್ಟ ಏನು ಎನ್ನುವುದನ್ನು ತಿಳಿದುಕೊಂಡೆ. ಜನರು ನೀರಿಲ್ಲ ಎಂದು ಹೇಳುತ್ತಿದ್ದಾಗ ಅವರ ಕಷ್ಟ ತಿಳಿದಿರಲಿಲ್ಲ. ಏಕೆಂದರೆ ನನ್ನ ಮನೆಯಲ್ಲಿ ಯಾವಾಗಲೂ ನೀರು ಬರುತ್ತಿತ್ತು. ಈ 4 ತಿಂಗಳಲ್ಲಿ ಜೈಲಿಗೆ ಹೋದಾಗ ಶೌಚಾಲಯದಲ್ಲಿ ನೀರಿಲ್ಲದೆ ಇದ್ದಾಗ ನನಗೆ ಆ ಕಷ್ಟ ತಿಳಿಯುತ್ತಿತ್ತು ಎಂದು ನಲಪಾಡ್ ಹೇಳಿದ್ದಾನೆ.
ನನ್ನ ಕೈಯಲ್ಲಿ ಆದಷ್ಟು ನಾನು ಸಹಾಯ ಮಾಡುತ್ತೇನೆ. ಜನರ ಜೊತೆ ಇರುತ್ತೇನೆ ಎಂದು ನಾನು ನಿರ್ಧರಿಸಿದ್ದೇನೆ. ನನಗೆ ಸಪೋರ್ಟ್ ಆಗಿ ನನ್ನ ತಾತ ನಿಂತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ನಾನು ಒಂದು ಗಿಫ್ಟ್ ನೀಡುತ್ತೇನೆ. ಮುಂದಿನ ವರ್ಷ ಅವರ ಹುಟ್ಟುಹಬ್ಬಕ್ಕೆ ನಾನು ಒಳ್ಳೆಯ ಮೊಮ್ಮಗನಾಗಿ ಬದಲಾಗುತ್ತೇನೆ ಎಂದಿದ್ದಾನೆ.
9 ಗಂಟೆ ನಂತರ ಎಲ್ಲಿಯೂ ಹೋಗಬಾರದು ಎಂದು ನನ್ನ ತಾತ ಹೇಳಿದ್ದಾರೆ. ಹಾಗಾಗಿ ನಾನು 9 ಗಂಟೆ ನಂತರ ಎಲ್ಲಿಯೂ ಹೋಗುತ್ತಿಲ್ಲ. 9 ಗಂಟೆ ಮೊದಲು ಕರೆದರೆ ಮಾತ್ರ ಬರುತ್ತೇನೆ ಎಂದು ನಲಪಾಡ್ ವೇದಿಕೆಯಲ್ಲಿ ಹೇಳಿದ್ದಾನೆ.