ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಆಸ್ತಿಯನ್ನು ಹರಾಜಿಗಿಡಲು ಮುಹೂರ್ತ ಫಿಕ್ಸ್ ಆಗಿದೆ. ಮುಂಬೈನಲ್ಲಿರುವ ದಾವೂದ್ನ ಮೂರು ಆಸ್ತಿಗಳನ್ನು ಆಗಸ್ಟ್ 9 ರಂದು ಹರಾಜಿಗಿಡಲು ಕೇಂದ್ರ ಹಣಕಾಸು ಸಚಿವಾಲಯ ನಿರ್ಧರಿಸಿದೆ.
ನಗರದ ಮಸುಲ್ಲಾ ಬಿಲ್ಡಿಂಗ್, ಬೇಂಡಿ ಬಜಾರ್ ಪ್ರದೇಶದಲ್ಲಿರುವ ದಾವೂದ್ ಹಾಗೂ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಹರಾಜು ಮಾಡಲಾಗುತ್ತಿದೆ. ಇದಕ್ಕಾಗಿ ಬಿಡ್ದಾರರಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ. ಒಟ್ಟು ಆಸ್ತಿ ಹರಾಜು ಮೌಲ್ಯವನ್ನು 79.43 ಲಕ್ಷ ರೂಪಾಯಿಗಳ ಆರಂಭಿಕ ದರಕ್ಕೆ ನಿಗದಿ ಮಾಡಲಾಗಿದೆ. ಕಳ್ಳಸಾಗಣೆ ಹಾಗೂ ಫಾರಿನ್ ಎಕ್ಸೆಚೇಂಜ್ ಮ್ಯಾನಿಪ್ಯುಲೇಟರ್ ಕಾಯ್ದೆ ಅಡಿ ಹರಾಜು ಮಾಡಲಾಗುತ್ತಿದೆ.
ಆಗಸ್ಟ್ 9ರಂದು ವೈ.ಬಿ. ಚವಾಣ್ ಅಡಿಟೋರಿಯಂನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12ವರೆಗೆ ಮಾತ್ರ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ದಾವೂದ್ ಆಸ್ತಿ ಖರೀದಿಸಲು ಬಯಸುವವರು ಆ.6ರೊಳಗೆ 25 ಲಕ್ಷ ರೂಪಾಯಿಗಳನ್ನು ಡಿಪಾಸಿಟ್ ಮಾಡಬೇಕಂತೆ. ಕಳೆದ ಬಾರಿ ಕೂಡ ಭೂಗತ ಪಾತಕಿಯ ಆಸ್ತಿಯನ್ನು ಹರಾಜು ಮಾಡಲಾಗಿತ್ತು. ಆಗ ಮೂರು ಆಸ್ತಿಗಳನ್ನು 11.5 ಕೋಟಿ ರೂಪಾಯಿ ಕೊಟ್ಟು ಸೈಫಿ ಬುರ್ಹಾನಿ ಅಪ್ಲಿಫ್ಟಮೆಂಟ್ ಎಂಬ ಟ್ರಸ್ಟ್ ಖರೀದಿಸಿತ್ತು.