ಶಿಮ್ಲಾ ಆಸ್ಪತ್ರೆಯಲ್ಲಿ ಮೈಸೂರು ಮೂಲದ ಮಹಿಳೆ: ವಾಪಸ್ ಕರೆತರಲು ಸಿಎಂ ಸೂಚನೆ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಹಿಮಾಚಲ ಪ್ರದೇಶದ ಶಿಮ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೈಸೂರು ಮೂಲದ ಮಹಿಳೆಯನ್ನು ರಾಜ್ಯಕ್ಕೆ ವಾಪಸ್ ಕರೆತರಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪತಿಯಿಂದ ದೂರವಾಗಿದ್ದ ಈ ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿ ತನ್ನ ಅರಿವಿಗೆ ಬಾರದಂತೆ ಹಿಮಾಚಲ ಪ್ರದೇಶ ಸೇರಿದ್ದಳು. ಈ ಮಹಿಳೆ ಶಿಮ್ಲಾದ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು.

ಮುಖ್ಯಮಂತ್ರಿಯವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದಾಗ ಮಾಧ್ಯಮದವರು, ಈ ಮಹಿಳೆಯ ಕುರಿತು ಮಾಹಿತಿ ನೀಡಿ ಅವರು ಊರಿಗೆ ಹಿಂತಿರುಗಲು ನೆರವಾಗುವಂತೆ ಮನವಿ ಮಾಡಿದ್ದರು.

ಕುಮಾರಸ್ವಾಮಿ ಅವರು ಇಂದು ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಮಹಿಳೆಯನ್ನು ಸುರಕ್ಷಿತವಾಗಿ ಕರೆತಂದು, ಸೂಕ್ತ ಚಿಕಿತ್ಸೆ ಕೊಡಿಸಿ, ಆಶ್ರಯ ಒದಗಿಸಲು ಸೂಚಿಸಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಗಳು ಆ ಮಹಿಳೆಯನ್ನು ರಾಜ್ಯಕ್ಕೆ ವಾಪಸ್ ಕರೆತರಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಹಿಮಾಚಲ ಪ್ರದೇಶದ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಮಹಿಳೆಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದು, ಚಿಕಿತ್ಸೆಯ ನಂತರ ಆಕೆಗೆ ಆಶ್ರಯ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಈ ಮಹಿಳೆ ಪತಿಯಿಂದ ಪರಿತ್ಯಕ್ತಳಾಗಿದ್ದು, ಹಿಮಾಚಲ ಪ್ರದೇಶದ ಕಾಂಗ್ರಾದ ಬೀದಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಕಾಂಗ್ರಾದ ಡಾ. ರಾಜೇಂದ್ರಪ್ರಸಾದ್ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಾಖಲಿಸಲಾಗಿತ್ತು. ನಂತರ ಜೂನ್ 2016 ರಲ್ಲಿ ಹಿಮಾಚಲ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಆಸ್ಪತ್ರೆಗೆ ಸ್ಥಳಾಂತರಗೊಳಿಸಲಾಗಿತ್ತು. ಭಾಷೆಯ ಸಮಸ್ಯೆಯಿಂದಾಗಿ ಆ ಊರನವರೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಆಗಿರಲಿಲ್ಲ ಹಾಗೂ ಆಘಾತಗೊಂಡಿದ್ದರಿಂದ ಅವರು ಅಲ್ಲಿ ಹೇಗೆ ತಲುಪಿದರು ಎಂಬುದನ್ನು ಅವರಿಗೆ ತಿಳಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ