ತುಮಕೂರು, ಜು.23- ಜಿಲ್ಲೆಯ ಕೊರಟಗೆರೆ ತಾಲೂಕಿನ ಬುರುಗನಹಳ್ಳಿ ಬೆಟ್ಟದಲ್ಲಿ ಎರಡು ಮರಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಈ ಭಾಗದಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಬೆಟ್ಟಕ್ಕೆ ಜಾನುವಾರುಗಳನ್ನು ಮೇಯಿಸಲು ಬರುವವರ ಮೇಲೆ ದಾಳಿ ನಡೆಸುತ್ತಿವೆ. ಇದರಿಂದ ಕುರಿಗಾಯಿಗಳು, ರೈತರು ಬೆಟ್ಟದ ಕಡೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಅಲ್ಲದೆ, ಬೆಟ್ಟದ ಕಡೆಗೆ ಮೇಯಲು ಹೋಗುತ್ತಿದ್ದ ಕುರಿ, ಮೇಕೆಗಳನ್ನು ಸಹ ಚಿರತೆಗಳು ಹೊತ್ತೊಯ್ಯುತ್ತಿವೆ. ಕುರಿಗಳನ್ನು ಹುಡುಕಿಕೊಂಡು ಬೆಟ್ಟದ ಕಡೆ ಹೋದಾಗ ರೈತರೊಬ್ಬರಿಗೆ ಎರಡು ಚಿರತೆ ಮರಿಗಳು ಬಂಡೆಯ ಕೆಳಗೆ ಮಲಗಿರುವುದು ಕಂಡುಬಂದಿದೆ.
ಇದರಿಂದ ಗಾಬರಿಗೊಂಡ ರೈತ ಓಡಿಬಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಈಗಾಗಲೇ ಮಧುಗಿರಿ, ಪಾವಗಡ, ಶಿರಾ, ಕೊರಟಗೆರೆ, ತಿಪಟೂರು, ಗುಬ್ಬಿ, ಕುಣಿಗಲ್ ತಾಲೂಕು ಸೇರಿದಂತೆ ಮತ್ತಿತರೆಡೆ ಚಿರತೆಗಳ ಹಾವಳಿ ಹೆಚ್ಚಾಗಿದೆ. ಕೆಲವು ಕಡೆ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಗಳನ್ನು ಸೆರೆಹಿಡಿದು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಜಿಲ್ಲೆಯಲ್ಲಿರುವ ಉಳಿದ ಚಿರತೆಗಳನ್ನು ಸಹ ಸೆರೆಹಿಡಿಯುವಂತೆ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.