ಉಡುಪಿ, ಜು.23- ಪಟ್ಟದ ದೇವರ ವಿಚಾರದಲ್ಲಿ ಶಿರೂರು ಶ್ರೀಗಳಾದ ಲಕ್ಷ್ಮೀವರ ತೀರ್ಥರು ಆರು ಮಠಾಧೀಶರ ವಿರುದ್ಧ ಉಡುಪಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಕೇವಿಯಟ್ ಅನೂರ್ಜಿತಗೊಂಡಿದೆ. ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಈ ಅರ್ಜಿ ಅನೂರ್ಜಿತಗೊಂಡಿದೆ.
ಪಟ್ಟದ ದೇವರನ್ನು ಹಿಂದಿರುಗಿಸಲು ನಿರಾಕರಿಸಿದ ಅಷ್ಟ ಮಠಾಧೀಶರಲ್ಲಿ ಪುತ್ತಿಗೆ ಶ್ರೀಗಳನ್ನು ಹೊರತುಪಡಿಸಿ ಇತರ ಮಠಾಧೀಶರ ವಿರುದ್ದ ನ್ಯಾಯಾಲಯದಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ ಅರ್ಜಿ ವಜಾ ಆಗಿದೆ ಎಂದು ತಿಳಿದುಬಂದಿದೆ.
ಕೇವಿಯಟ್ಗೆ ಆಕ್ಷೇಪಣೆ ಸಲ್ಲಿಸಲು 90 ದಿನಗಳ ಕಾಲಾವಕಾಶವಿರುತ್ತದೆ. ಈ ಅವಧಿಯಲ್ಲಿ ಶಿರೂರು ಶ್ರೀ ವಿರುದ್ಧ ಯಾರೂ ಮಾತನಾಡಬಾರದು, ಶಿಷ್ಯ ಸ್ವೀಕಾರಕ್ಕಾಗಿ ಯಾರೂ ಅವರನ್ನು ಒತ್ತಾಯಿಸಬಾರದು ಎಂದು ಸೂಚಿಸಲಾಗಿತ್ತು. ಪಟ್ಟದ ದೇವರನ್ನು ಕೊಡದಿದ್ದರೆ ಕ್ರಿಮಿನಲ್ ಕೇಸು ದಾಖಲಿಸುವುದಾಗಿಯೂ ಶಿರೂರು ಶ್ರೀಗಳು ಹೇಳಿದ್ದರು. ಪ್ರಸ್ತುತ ಪಟ್ಟದ ದೇವರ ವಿಗ್ರಹ ಕೃಷ್ಣ ಮಠದಲ್ಲಿದೆ. ಹೀಗಾಗಿ ಪರ್ಯಾಯ ಪಾಲೇಮಾರು ಶ್ರೀಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಶಿರೂರು ಶ್ರೀಗಳು ತಮ್ಮ ವಕೀಲರನ್ನು ಬರ ಹೇಳಿದ್ದರು. ಅಂದೇ ಅನಾರೋಗ್ಯಕ್ಕೆ ಈಡಾಗಿ ಆಸ್ಪತ್ರೆಗೆ ದಾಖಲಾಗಿ ಕಳೆದ ಗುರುವಾರ ನಿಧನರಾಗಿದ್ದರು. ನಿಧನದ ಹಿನ್ನೆಲೆಯಲ್ಲಿ ಕೇವಿಯಟ್ ಅರ್ಜಿ ವಜಾ ಆಗಿದೆ.