ಬೆಂಗಳೂರು, ಜು.23-ರಾಹುಲ್ಗಾಂಧಿ ಪ್ರಧಾನಿಯಾಗಲು ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಮಾಡಿಕೊಳ್ಳಲಾಗಿದೆ. ಇದು ಲೋಕಸಭೆ ಚುನಾವಣೆಯಲ್ಲೂ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ನಿನ್ನೆ ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ರಾಹುಲ್ಗಾಂಧಿಯವರ ಹೆಗಲಿಗೆ ಹೊರಿಸಲಾಗಿದೆ. ಹೀಗಾಗಿ ರಾಹುಲ್ಗಾಂಧಿಯವರು ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಮೊದಲ ಬಾರಿಗೆ ರಾಹುಲ್ಗಾಂಧಿ ನಾಯಕತ್ವಕ್ಕೆ ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದೆ.
ಮಾಯಾವತಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಪ್ರಕಾಶ್ ಕಾರಟ್, ಮುಲಾಯಮ್ಸಿಂಗ್ ಯಾದವ್, ಅರವಿಂದ್ ಕೇಜ್ರಿವಾಲ್ ಮತ್ತಿತರ ನಾಯಕರು ಪ್ರಧಾನಿ ಹುದ್ದೆಯ ರೇಸ್ನಲ್ಲಿದ್ದಾರೆ. ಇವರೆಲ್ಲರನ್ನೂ ಬದಿಗಿಟ್ಟು ರಾಹುಲ್ಗಾಂಧಿ ಪ್ರಧಾನಿಯಾಗುವ ಹಪಾಹಪಿಯಲ್ಲಿದ್ದಾರೆ.
ನಿನ್ನೆ ಎಐಸಿಸಿ ಕಾರ್ಯಕಾರಿಣಿ ಸಮಿತಿ ಸಭೆ ನಂತರ ಇನ್ನಷ್ಟು ಬಲ ಪಡೆದಿರುವ ರಾಹುಲ್ಗಾಂಧಿಯವರು ಪ್ರಧಾನಿಯಾಗುವ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಬಿಎಸ್ಪಿ ಮಾಯಾವತಿ, ಟಿಎಂಸಿಯ ಮಮತಾ ಬ್ಯಾನರ್ಜಿ, ತೆಲುಗು ದೇಶಂನ ಚಂದ್ರಬಾಬು ನಾಯ್ಡು, ಆಮ್ ಆದ್ಮಿಯ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಯಾವ ನಾಯಕರೂ ರಾಹುಲ್ಗಾಂಧಿಗೆ ಈವರೆಗೂ ಬಹಿರಂಗ ಬೆಂಬಲ ವ್ಯಕ್ತಪಡಿಸಿಲ್ಲ. ಮೊದಲ ಬಾರಿಗೆ ದೇವೇಗೌಡರ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ.
JDS full support to become Rahul gandhi Prime Minister, former Prime Minister HD Deve Gowda