ಮಂಡಿ, ಜು.23-ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ವಸತಿ ಕಟ್ಟಡವೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ ಐವರು ಮೃತಪಟ್ಟದ್ದಾರೆ. ಕಟ್ಟಡದ ಒಳಗೆ ಸಿಲುಕಿರುವ ಅನೇಕರನ್ನು ರಕ್ಷಿಸಲು ಸಮರೋಪಾದಿಯ ಕಾರ್ಯಾಚರಣೆ ನಡೆಯಿತು.
ಮಂಡಿ ನಗರದ ನೆರ್ ಚೌಕದಲ್ಲಿ ಇಂದು ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡು ಕಟ್ಟಡವನ್ನು ವ್ಯಾಪಿಸಿತು. ಸುದ್ದಿ ತಿಳಿದ ಕೂಡಲೇ ಮೂರು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಮಾಡಿದರು. ಈ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ. ಒಳಗೆ ಸಿಲುಕಿರುವ ಮತ್ತಷ್ಟು ಜನರನ್ನು ರಕ್ಷಿಸಲು ಶ್ರಮಿಸಿದರು ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಕಟ್ಟಡದಲ್ಲಿನ ಒಂದು ಮನೆಯಲ್ಲಿ ಸಿಲಿಂಡರ್ನಿಂದ ಅನಿಲ ಸೋರಿಕೆ ಮತ್ತು ನಂತರ ಬೆಂಕಿ ಹೊತ್ತಿಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.