ಬೆಂಗಳೂರು, ಜು.23- ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಈ ತಿಂಗಳ ಅಂತ್ಯದೊಳಗೆ ಶೇ.80ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಳ್ಳಲಿದ್ದು, ಸೆಪ್ಟೆಂಬರ್ನಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಶೇ.63ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು 10 ದಿನಗಳಲ್ಲಿ ಶೇ. 17ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗುವುದು. ಬೆಂಗಳೂರಿನಿಂದ ನಿಡಘಟ್ಟ ಹಾಗೂ ನಿಡಘಟದಿಂದ ಮೈಸೂರುವರೆಗೆ 6 ಪಥದ ರಸ್ತೆ ಇದಾಗಿದ್ದು,(ರಾ.ಹೆ.275) ಎರಡು ಪ್ಯಾಕೇಜ್ ಒಳಗೊಂಡಿದೆ ಎಂದು ಹೇಳಿದರು.
ಬೆಂಗಳೂರು- ನಿಡಘಟ್ಟದವರೆಗೆ 54 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು 2334 ಕೋಟಿ ರೂ, ನಿಡಘಟ್ಟದಿಂದ ಮೈಸೂರುವರೆಗೆ 61 ಕಿ.ಮೀ ರಸ್ತೆ ಅಭಿವೃದ್ದಿಪಡಿಸಲು 2685 ಕೋಟಿ ರೂ. ವೆಚ್ಚವಾಗಲಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 27 ಸಾವಿರ ಕೋಟಿ ರೂ. ಮೊತ್ತದ ರಾಷ್ಟ್ರೀಯ ಹೆದ್ದಾರಿಗಳಿಗೆ ಅನುಮೋದನೆ ದೊರೆತಿದ್ದು, ರಾಜ್ಯ ಸರ್ಕಾರದ ಅನುದಾನ 10 ಸಾವಿರಕೋಟಿ ನೀಡಲಾಗುತ್ತದೆ. ಒಟ್ಟು 37 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು-ಮೈಸೂರು, , ತುಮಕೂರು-ಶಿವಮೊಗ್ಗ ಬೆಳಗಾವಿ-ಖಾನಾಪುರ, ಖಾನಾಪುರ-ಗೋವಾ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಸುಮಾರು 2000 ಕಿ.ಮೀ ರಸ್ತೆ ಅಭಿವೃದ್ದಿ ಕೈಗೊಳ್ಳಲಾಗುವುದು.
ಸೇವಾ ತೆರಿಗೆ ಇಳಿಸುವ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಶೇ.12.5ರಿಂದ ಶೇ.2.5ಕ್ಕೆ ಇಳಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಿಗೆ ಭೂ ಸ್ವಾಧೀನ, ವಿದ್ಯುತ್, ನೀರು ಪೂರೈಕೆ ಮಾರ್ಗಗಳ ಬದಲಾವಣೆ ಮಾಡಲಾಗುತ್ತದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಸಲಾಗುತ್ತದೆ. ಚಾರ್ಮುಡಿ ಘಾಟ್ ರಸ್ತೆ ಅಭಿವೃದ್ಧಿಗಾಗಿ 250 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಭೂಕುಸಿತ ತಡೆಗೂ ಸೂಚನೆ ನೀಡಲಾಗಿದೆ. ಕೇಂದ್ರದ ಅನುಮತಿ ದೊರೆತ ನಂತರ ಚಾಲನೆ ನೀಡಲಾಗುವುದು ಎಂದರು.
ಸಿಗಂದೂರು ಸೇತುವೆ ನಿರ್ಮಿಸಲು 500 ಕೋಟಿ ರೂ. ಒದಗಿಸಲಾಗಿದೆ. ಸಿಆರ್ಎಫ್ ನಿಧಿಯಡಿ 7000 ಕೋಟಿ ರೂ. ಮಂಜೂರಾಗಿದ್ದರೂ ವಾರ್ಷಿಕ 500 ಕೋಟಿ ರೂ. ಮಾತ್ರ ಬಿಡಗುಡೆಯಾಗುತ್ತಿದೆ. 1200 ಕೋಟಿ ರೂ. ಮೊತ್ತದ ಬಿಲ್ಗಳೇ ಬಾಕಿ ಉಳಿದಿವೆ ಎಂದು ಅವರು ಹೇಳಿದರು.
ಮಳೆಯಿಂದ ಹಾನಿಗೀಡಾಗಿರುವ ರಸ್ತೆ ಗುಂಡಿ ಮುಚ್ಚಲು ಪ್ರತಿ ಕಿ.ಮೀಗೆ 25 ಸಾವಿರ ರೂ.ನಂತೆ ಹಣ ಬಿಡುಗಡೆ ಮಾಡಲಾಗುವುದು. ಮಲೆನಾಡು, ಕರಾವಳಿ, ಕೊಡಗು ಭಾಗದಲ್ಲಿ ಪ್ರತಿ ಹಳ್ಳಿಗಳನ್ನು ದಾಟಲು ಉಂಟಾಗಿರುವ ತೊಂದರೆ ತಪ್ಪಿಸಲು ಚಿಕ್ಕ ಸೇತುವೆ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈ ಸಂಬಂಧ ಎಂಜಿನಿಯರ್ಗಳ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಮುಂಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಮತ್ತು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ರೇವಣ್ಣ ಅವರು ತಿಳಿಸಿದರು.
Bangalore-Mysore National Highway, Land Acquisition,H D Revanna