ಅಹಮದಾಬಾದ್:ಜು-23: ಪ್ರಕರಣದ ವಿಚಾರಣೆಗಳನ್ನು ಅನಗತ್ಯವಾಗಿ ಮುಂದೂಡುವ ಪ್ರವೃತ್ತಿಗೆ ಗುಜರಾತ್ ಹೈಕೋರ್ಟ್ ಇತಿಶ್ರೀ ಹಾಡಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು 1 ವಾರಕ್ಕಿಂತಲೂ ಹೆಚ್ಚು ಕಾಲ ಮುಂದೂಡಿದರೆ ಅಂತಹ ನ್ಯಾಯಾಧೀಶರಿಗೆ ಸಂದೇಶ ಕಳುಹಿಸಲಾಗುತ್ತದೆ. ತಮ್ಮ ಈ ನಿರ್ಧಾರಕ್ಕೆ ಅವರು ಸ್ಪಷ್ಟನೆಯನ್ನು ನೀಡಬೇಕಾಗುತ್ತದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವುದು ಗಮನಾರ್ಹ ಅಂಶವಾಗಿದೆ.
ಈ ಮೂಲಕ ನ್ಯಾಯಾಧೀಶರು ಸಕಾರಣವಿಲ್ಲದೇ ವಿಚಾರಣೆಯನ್ನು ಮುಂದೂಡುವಂತಿಲ್ಲ ಎಂದು ಹೇಳುವ ಮೂಲಕ ನ್ಯಾಯಾಂಗ ಸುಧಾರಣೆಯ ಕಡೆ ಗುಜರಾತ್ ಹೈಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ.
ನ್ಯಾಯಾಧೀಶರ ಕಾರ್ಯನಿರ್ವಹಣೆಯನ್ನು ಟ್ರ್ಯಾಕ್ ಮಾಡುವ ತಂತ್ರಾಂಶದ ಅಳವಡಿಕೆ , ಕೆಳಹಂತದ ನ್ಯಾಯಾಲಯಗಳ ನ್ಯಾಯಾಧೀಶರ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಆಪ್ತಸಮಾಲೋಚನೆಯಂತಹ ಮಹತ್ವದ ಗುರಿಗಳನ್ನು ಹೈಕೋರ್ಟ್ ಹಾಕಿಕೊಂಡಿದೆ. ಅದರ ಜತೆಗೆ 5 ವರ್ಷಗಳಿಗಿಂತಲೂ ಹಳೆಯದಾದ ಪ್ರಕರಣಗಳ ಮುಂದೂಡುವಿಕೆ ಪ್ರವೃತ್ತಿಯನ್ನು ನಿಯಂತ್ರಿಸಲು ಮುಂದಾಗಿದೆ.
ಸದ್ಯ ಗುಜರಾತ್ ನ್ಯಾಯಾಲಯಗಳಲ್ಲಿ 16 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಇತ್ಯರ್ಥಕ್ಕಾಗಿ ಕಾದಿದ್ದು, ಅದರಲ್ಲಿ ನಾಲ್ಕನೆಯ ಒಂದು ಭಾಗದಷ್ಟು ಪ್ರಕರಣಗಳು ಐದು ವರ್ಷಕ್ಕಿಂತ ಹಿಂದಿನವು. ಪ್ರಕರಣಗಳ ವಿಚಾರಣೆಯನ್ನು ಪದೇ ಪದೇ ಮತ್ತು ದೀರ್ಘಾವಧಿಗೆ ಮುಂದೂಡುವುದು ಪುನರಾವರ್ತಿತವಾಗುತ್ತಿರುವುದರಿಂದ ನ್ಯಾಯ ತೀರ್ಮಾನ ವಿಳಂಬವಾಗುತ್ತಿರುವುದನ್ನು ಗಮನಿಸಿ ಸಂದೇಶ ರವಾನೆ ಮತ್ತು ಎಚ್ಚರಿಕೆ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
No tareekh beyond 7 days,Gujarat High Court,software to track judges’ productivity