
ಚಿಕ್ಕಮಗಳೂರು, ಜು.22- ಮೈಸೂರಿನ ಯುವಕ ಕೆನಡಾ ಯುವತಿಯನ್ನು ಪ್ರೀತಿಸಿ ಕುಟುಂಬದವರ ಅನುಮತಿ ಪಡೆದು ಹಿಂದೂ ಸಂಪ್ರದಾಯದಂತೆ ಇಂದು ಅಸೆಮಣೆ ಏರಿದ್ದಾರೆ. ಮೈಸೂರಿನ ಕುವೆಂಪುನಗರ ವಾಸಿ ಸಿ.ವಿಠಲ್ ಮತ್ತು ಎಸ್.ವೇದಾ ಅವರ ದ್ವಿತೀಯ ಪುತ್ರ ಶರತ್ ವಿಠಲ್ ಕೆನಡಾ ದೇಶದ ವೆನ್‍ಕಿದರ್ ನಿವಾಸಿ ಯೋಗಾ ಶಿಕ್ಷಕಿ ಕಾರ್ಲಿವೋಲ್ವಿಯಾ ಅವರೊಂದಿಗೆ ಸಪ್ತಪದಿ ತುಳಿದರು. ಶರತ್‍ವಿಠಲ್ ಹೋಟೆಲ್ ಇನ್‍ವೆಸ್ಟ್‍ಮೆಂಟ್ ಕೋರ್ಸ್ ಮುಗಿಸಿ ಕಳೆದ 9 ವರ್ಷಗಳ ಹಿಂದೆ ಕೆನಡಾಕ್ಕೆ ಹೋಗಿ ಹೊಟೇಲ್ ಉದ್ಯಮ ನಡೆಸುತ್ತಿದ್ದಾರೆ. ಹೋಟೆಲ್ ಸಮೀಪದಲ್ಲೇ ಸರ್ಕಾರಿ ಯೋಗಶಾಲೆ ಇದ್ದು ತಮ್ಮ ಹೋಟೆಲ್‍ನಿಂದ ಶರತ್ ಯೋಗ ಶಾಲೆಗೆ ಆಹಾರ ಸರಬರಾಜು ಮಾಡುತ್ತಾರೆ. ಈ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಕಾರ್ಲಿವೋಲ್ವಿಯಾ ಶರತ್‍ಗೆ ಪರಿಚಯವಾಗಿ ಸ್ನೇಹ ಬೆಳೆದು ನಂತರ ಪ್ರೀತಿಗೆ ತಿರುಗಿದೆ. ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರು ತಮ್ಮ ಮನೆಯವರಿಗೆ ವಿಷಯ ತಿಳಿಸಿ ಒಪ್ಪಿಗೆ ಪಡೆದುಕೊಂಡು ಇಂದು ಮದುವೆಯಾಗಿದ್ದಾರೆ.
ಶರತ್ ಆಸೆಯಂತೆ ಮಡಿಕೇರಿಯಲ್ಲಿ ವಿವಾಹ ನೆರವೇರಿತು. ಇಬ್ಬರ ಮನೆಯವರು ವಿವಾಹದಲ್ಲಿ ಪಾಲ್ಗೊಂಡಿದ್ದರು. ಸ್ನೇಹಿತರು, ಬಂಧುಬಳಗದವರು ನವ ಜೋಡಿಗೆ ಶುಭ ಹಾರೈಸಿದರು.