ಕಟ್ಟಡ ಯೋಜನಾ ನಕ್ಷೆ, ಲೇಔಟ್, ಭೂ ಪರಿವರ್ತನೆ ದಾಖಲೆಗಳು ಏಕಗವಾಕ್ಷಿ ಯೋಜನೆಯಡಿ

ಬೆಂಗಳೂರು,ಜು.19- ರಾಜ್ಯದಲ್ಲಿ ಮೊದಲ ಬಾರಿಗೆ ನಗರ ಪ್ರದೇಶಗಳಲ್ಲಿ ಕಟ್ಟಡ ಯೋಜನಾ ನಕ್ಷೆ, ಲೇಔಟ್, ಭೂ ಪರಿವರ್ತನೆಗೆ ಸಂಬಂಧಿಸಿದ ದಾಖಲೆಗಳ್ನು ಏಕಗವಾಕ್ಷಿ ಯೋಜನೆಯಡಿ ನೀಡಲಾಗುವುದು ಎಂದು ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದ್ದು, ಆನ್‍ಲೈನ್ ಮೂಲಕ ಮನೆಯಲ್ಲೇ ಕುಳಿತು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಇದರಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುವ ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ಕಿರುಕುಳವನ್ನು ತಪ್ಪಿಸಲು ಸಹಕಾರಿಯಾಗಲಿದೆ. 30×40 ಅಳತೆಯ ಕಟ್ಟಡಗಳಿಗೆ ಶೀಘ್ರದಲ್ಲೇ ನೇರವಾಗಿ ಲೈಸೆನ್ಸ್ ದೊರೆಯಲಿದೆ. ಇದನ್ನು 60×40 ಅಳತೆಯ ಕಟ್ಟಡಕ್ಕೂ ವಿಸ್ತರಿಸುವ ಚಿಂತನೆ ಇದೆ ಎಂದರು.
ದೊಡ್ಡ ಮಟ್ಟದ ಕಟ್ಟಡ, ಲೇಔಟ್, ಭೂ ಪರಿವರ್ತನೆಗೆ ಸಂಬಂಧಿಸಿದಂತೆ ಆನ್‍ಲೈನ್‍ನಲ್ಲಿ ಸಲ್ಲಿಕೆಯಾದ ಅರ್ಜಿ, ಸಂಬಂಧಪಟ್ಟ ಬೇರೆ ಬೇರೆ ಇಲಾಖೆಗಳಿಗೆ ರವಾನೆಯಾಗಲಿದೆ. ಆ ಇಲಾಖೆಗಳು 7 ದಿನದೊಳಗೆ ತಮ್ಮ ಪ್ರತಿಕ್ರಿಯೆ ನೀಡಬೇಕು, ಒಂದು ವೇಳೆ 7 ದಿನದೊಳಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಇದ್ದರೆ ಅರ್ಜಿ ಅನುಮೋದನೆಯಾಗಿದೆ ಎಂದೇ ಅರ್ಥ. ಮುಂದೊಂದು ದಿನ ಸಮಸ್ಯೆ ಉಂಟಾದರೆ ಸಂಬಂಧಪಟ್ಟ ಇಲಾಖೆಯೇ ಜವಾಬ್ದಾರಿಯಾಗುತ್ತದೆಯೇ ಹೊರತು ಫಲಾನುಭವಿಯಲ್ಲ ಎಂದು ಸ್ಪಷ್ಟಪಡಿಸಿದರು.

ನಗರಾಭಿವೃದ್ದಿ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕಟ್ಟಡ ಮಂಜೂರಾತಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ಒಮ್ಮೆ ಭೇಟಿ ಕೊಟ್ಟು ಪರಿಶೀಲಿಸಬೇಕಾಗುತ್ತದೆ. ಈ ವಿನೂತನ ಯೋಜನೆಯಿಂದ ಸಾರ್ವಜನಿಕರ ಶೇ.80ರಷ್ಟು ಸಮಸ್ಯೆಗಳು ಬಗೆಹರಿಯುತ್ತವೆ.
ನಗರಾಭಿವೃದ್ಧಿ ಇಲಾಖೆಯಡಿ ಇದಕ್ಕೆ ಅಗತ್ಯವಿರುವ ಸಾಫ್ಟ್‍ವೇgನ್ನು ಅಭಿವೃದ್ದಿಪಡಿಸಲಾಗಿದೆ. ಶೀಘ್ರದಲ್ಲೇ ಈ ಯೋಜನೆಯನ್ನು ಆರಂಭಿಸಲಾಗುವುದು. ಕಟ್ಟಡ ಮಂಜೂರಾತಿ ಸಂಬಂಧ ಎಲ್ಲ ಪ್ರಕ್ರಿಯೆಯೂ ಏಕಗವಾಕ್ಷಿ ಯೋಜನೆಯಡಿ 30 ದಿನದೊಳಗೆ ಪೂರ್ಣಗೊಳ್ಳಬೇಕಾಗಿದೆ. ರೇರಾ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳದೆ ಕಟ್ಟಡ ಕಟ್ಟುವುದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ರೀತಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Urban Development Minister UT Khader,Single-line project,Building project map, layout, land transition

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ