ಪೌರಕಾರ್ಮಿಕರ ನಕಲಿ ಹಾಜರಾತಿ ಮತ್ತು ಇಎಸ್‍ಐಟಿಎಫ್ ಯೋಜನೆ ಅಕ್ರಮ: ಸಿಬಿಐ ತನಿಖೆಗೆ ಶಿಫಾರಸು

ಬೆಂಗಳೂರು,ಜು.19- ಪೌರಕಾರ್ಮಿಕರ ನಕಲಿ ಹಾಜರಾತಿ ಮತ್ತು ಇಎಸ್‍ಐಟಿಎಫ್ ಯೋಜನೆಯಲ್ಲಿ ನಡೆದಿರುವ ಅಕ್ರಮವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಶಿಫಾರಸ್ಸು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಪೌರಡಾಳಿತ ಮತ್ತು ನಗರಾಭಿವೃದ್ದಿ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಬಯೋಮೆಟ್ರಿಕ್ ಅಳವಡಿಕೆ ನಂತರ ಬಹಳಷ್ಟು ಮಂದಿ ನಕಲಿ ಪೌರಕಾರ್ಮಿಕರು ಕಂಡುಬಂದಿದ್ದಾರೆ. ಇದರಿಂದ ಸುಮಾರು 550 ಕೋಟಿ ರೂ. ನಷ್ಟವಾಗಿದೆ.

ಇಎಸ್‍ಐಟಿಎಫ್ ಯೋಜನೆಯಡಿ 320 ಕೋಟಿ ಅವ್ಯಹಾರವಾಗಿದೆ. ಒಟ್ಟು 870 ಕೋಟಿ ರೂ.ಗಳ ಈ ಹಗರಣವನ್ನು ಏಳು ತಿಂಗಳ ಹಿಂದೆ ಎಸಿಬಿಯ ತನಿಖೆಗೆ ಒಪ್ಪಿಸಲಾಗಿತ್ತು. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಹಕಾರ ನೀಡಿಲ್ಲ. ತಮ್ಮ ಬಳಿ ದಾಖಲೆಗಳಿಲ್ಲ ಎಂದು ನೆಪ ಹೇಳಿ ವಿಚಾರಣೆಗೆ ಹಾಜರಾಗಲಿಲ್ಲ ಎಂದು ಹೇಳಿದರು.

ಎಸಿಬಿ ರಾಜ್ಯ ಸರ್ಕಾರದ ಸಂಸ್ಥೆಯಾಗಿರುವುದರಿಂದ ಹೊಂದಾಣಿಕೆ ಮಾಡಿಕೊಂಡು ಹಗರಣ ಮುಚ್ಚಿ ಹಾಕಬಹುದು ಎಂಬ ಮನಸ್ಥಿತಿಯಲ್ಲಿ ಅಧಿಕಾರಿಗಳಿದ್ದಾರೆ. ಹೀಗಾಗಿ ಇದನ್ನು ಸಿಬಿಐಗೆ ಒಪ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇನೆ ಎಂದರು.

ಪೌರಕಾರ್ಮಿಕರ ಸಂಘಟನೆಗಳ ಪ್ರಮುಖರು, ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಸಾವಿರ ಪೌರಕಾರ್ಮಿಕರು ಇದ್ದಾರೆ ಎಂದು ಹೇಳುತ್ತಿದ್ದು, ಬಯೋಮೆಟ್ರಿಕ್ ಅಳವಡಿಕೆಯ ನಂತರ ಕೇವಲ 15 ಸಾವಿರ ಜನ ಲೆಕ್ಕಕ್ಕೆ ಸಿಕ್ಕಿದ್ದಾರೆ. ಉಳಿದ 10 ಸಾವಿರ ಜನ ಎಲ್ಲಿ ಹೋದರು ಎಂದು ಪ್ರಶ್ನಿಸಿದರು.

ಹೆಲ್ತ್ ಇನ್‍ಸ್ಪೆಕ್ಟರ್ ದಪೇದಾರ್ ಹಾಗೂ ಕಂದಾಯ ನಿರೀಕ್ಷಕರ ಹೆಂಡತಿ ಮಕ್ಕಳ ಹೆಸರಗಳನ್ನು ಪೌರಕಾರ್ಮಿಕರ ಪಟ್ಟಿಗೆ ಸೇರಿಸಿ ವೇತನ ಪಡೆಯಲಾಗಿದೆ. ಇಂತಹ ಹಗರಣಗಳು ಬಹಳಷ್ಟಿವೆ. ನಿಜವಾಗಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಎಲ್ಲ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ನಡೆಸುವಂತೆ ರಾಷ್ಟ್ರೀಯ ಆಯೋಗದ ಸದಸ್ಯರು ಶಿಫಾರಸ್ಸು ಮಾಡಿದ್ದಾರೆ.

ಮುಂದುವರೆದು ಮಾತನಾಡಿದ ಹಿರೇಮನಿ ಅವರು, ರಾಜ್ಯ ಸರ್ಕಾರ 700 ಜನರಿಗೆ ಒಬ್ಬ ಪೌರಕಾರ್ಮಿಕ ಎಂಬ ನಿಯಮ ರೂಪಿಸಿರುವುದು ಸರಿಯಲ್ಲ. ಈ ಹಿಂದೆ ಐಪಿಡಿ ಸಾಲಪ್ಪ ಆಯೋಗ ಮತ್ತು ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಎರಡೂ ಸಂಸ್ಥೆಗಳು 500 ಜನರಿಗೆ ಒಬ್ಬ ನನ್ನು ನೇಮಿಸುವಂತೆ ತಮ್ಮ ವರದಿಯಲ್ಲಿ ಶಿಫಾರಸು ಮಾಡಿವೆ. ಅದನ್ನು ತಿರಸ್ಕರಿಸಿ ಸರ್ಕಾರ 700 ಮಂದಿಗೆ ಒಬ್ಬರಂತೆ ನಿಯಮ ರೂಪಿಸಿದೆ. ಇದರಿಂದ ಹಾಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಲ್ಲಿ 8000 ಮಂದಿ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ 42 ಸಾವಿರ ಪೌರಕಾರ್ಮಿಕರು ಇದ್ದಾರೆ. ಅವರಲ್ಲಿ ಸುಮಾರು 32 ಸಾವಿರ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ 11 ಸಾವಿರ ಪೌರಕಾರ್ಮಿಕರನ್ನು ನೇಮಿಸಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ ನೇಮಕಾತಿಯಲ್ಲಿ ಸುಪ್ರೀಂಕೋಟ್ ್ ತೀರ್ಪನ್ನು ಆಧರಿಸಿ ಮೀಸಲಾತಿ ಜಾರಿಗೆ ತರಲಾಗಿದೆ. ದಲಿತ ಸಮುದಾಯ ಬಿಟ್ಟು ಯಾರು ಪೌರಕಾರ್ಮಿಕ ಕೆಲಸಗಳನ್ನು ಮಾಡುವುದಿಲ್ಲ. ಹೀಗಾಗಿ ಈ ಮೀಸಲಾತಿ ಅನಗತ್ಯವಾಗಿದೆ. ರಾಜ್ಯ ಸರ್ಕಾರ ಸೂಕ್ತ ತಿದ್ದುಪಡಿಗಳನ್ನು ತಂದು ದಲಿತ ಸಮುದಾಯದವರೇ ನೇಮಕಾತಿ ಹೊಂದಲು ಅವಕಾಶ ಮಾಡಿಕೊಡುವಂತೆ ನಿರ್ದೇಶನ ನೀಡುವುದಾಗಿ ಹೇಳಿದರು.

ಸಫಾಯಿ ಕರ್ಮಚಾರಿಗಳ ಪೈಕಿ ಸುಮಾರು 22 ಸಾವಿರ ಮಂದಿಗೆ ಮನೆ ಇಲ್ಲ. ಅವರಿಗೆ ಮನೆ ನಿರ್ಮಿಸಿಕೊಡಬೇಕು, ಹಿಂದೆ ಮಲ ಹೊರುವ ಕೆಲಸ ಮಾಡುತ್ತಿದ್ದವರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಇರುವ ಯೋಜನೆಗಳನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

Jagadish Hiremani,member of National Commission for Safai Karmacharis

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ