ನೋಯ್ಡಾದ ಕಟ್ಟಡ ಕುಸಿತ ಪ್ರಕರಣ: ಸತ್ತವರ ಸಂಖ್ಯೆ 9ಕ್ಕೆ

ನೋಯ್ಡಾ, ಜು.19-ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಿರ್ಮಾಣ ಹಂತದ ಎರಡು ಕಟ್ಟಡಗಳು ಕುಸಿದು ಬಿದ್ದ ದುರಂತದಲ್ಲಿ ಸತ್ತವರ ಸಂಖ್ಯೆ 9ಕ್ಕೇರಿದೆ. ರಾಜಧಾನಿ ದೆಹಲಿ ಹೊರವಲಯದ ಶಾ ಬೇರಿ ಗ್ರಾಮದಲ್ಲಿ ಕುಸಿದ ಕಟ್ಟಡಗಳ ಭಗ್ನಾವಶೇಷಗಳ ಅಡಿ ಇನ್ನೂ ಕೆಲವರು ಸಿಲುಕಿರುವ ಶಂಕೆ ಇದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ. ಶಾ ಬೆರಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಆರು ಅಂತಸ್ತುಗಳ ಕಟ್ಡಡವೊಂದು ಕುಸಿದು ಪಕ್ಕದಲ್ಲಿದ್ದ ಇನ್ನೊಂದು ಕಟ್ಟಡದ ಮೇಲೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿತ್ತು. ಈವರೆಗೆ ಒಂಭತ್ತು ಮೃತದೇಹಗಳನ್ನು ಕಟ್ಟಡದ ಅವಶೇಷಗಳಿಂದ ಹೊರ ತೆಗೆಯಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‍ಡಿಆರ್‍ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್‍ಡಿಆರ್‍ಎಫ್ ಜೊತೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ.
ಸುರಕ್ಷತೆ ನಿಯಮಗಳ ಉಲ್ಲಂಘನೆ ಮತ್ತು ಕಳಪೆ ಕಾಮಗಾರಿಯೇ ಈ ದುರಂತಕ್ಕೆ ಕಾರಣವಾಗಿದ್ದು, ಕಟ್ಟಡ ನಿರ್ಮಾಣ ಸಂಸ್ಥೆ, ಮಾಲೀಕರು, ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳೂ ಸೇರಿದಂತೆ ಕೆಲವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ