ನವದೆಹಲಿ, ಜು.19-ಮಾಹಿತಿ ಹಕ್ಕು ಕಾಯ್ದೆ(ಆರ್ಟಿಐ)ಗೆ ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕಾನೂನು ನಿರುಪಯುಕ್ತ ಮಾಡುವ ಯತ್ನ ಇದಾಗಿದೆ ಎಂದು ಟೀಕಿಸಿದ್ದಾರೆ. ಪ್ರತಿಯೊಬ್ಬ ಭಾರತೀಯರು ಸತ್ಯಾಂಶ ತಿಳಿಯಲು ಬಯಸುತ್ತಾರೆ. ಆದರೆ ಬಿಜೆಪಿ ನಿಜವನ್ನು ಬಚ್ಚಿಡಲು ಯತ್ನಿಸುತ್ತಿದೆ. ಜನರಿಂದ ಸತ್ಯವನ್ನು ಮರೆಮಾಚಬೇಕೆಂಬುದು ಬಿಜೆಪಿ ಉದ್ದೇಶ. ಜನರ ಹಕ್ಕನ್ನು ಕಸಿದುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಆರ್ಟಿಐಗೆ ಮಾರ್ಪಾಡು ಮಾಡಿದರೆ ಕಾನೂನೇ ನಿರರ್ಥಕವಾಗುತ್ತದೆ ಎಂದು ರಾಹುಲ್ ಟ್ವಿಟರ್ನಲ್ಲಿ ಟೀಕಿಸಿದ್ದಾರೆ. ಸಂಸದರ ವೇತನ, ಭತ್ಯೆ ಮತ್ತು ಸೇವಾ ಷರತ್ತುಗಳನ್ನು ಚುನಾವಣಾ ಆಯೋಗದೊಂದಿಗೆ ಮಾಹಿತಿ ನೀಡುವುದರಿಂದ ದೂರ ಉಳಿಯುವುದಕ್ಕೆ ಸಂಬಂಧಪಟ್ಟಂತೆ ಆರ್ಟಿಐಗೆ ಬದಲಾವಣೆ ತರಲು ಬಿಜೆಪಿ ಉದ್ದೇಶಿಸಿದೆ. ಈ ಸಂಬಂಧ ಪ್ರಸ್ತಾವಿತ ತಿದ್ದುಪಡಿಗಳನ್ನು ಸಂಸದರಿಗೆ ಸುತ್ತೋಲೆ ಮೂಲಕ ತಿಳಿಸಲಾಗಿದೆ. ಬಿಜೆಪಿಯ ಈ ಮಾರ್ಪಾಡಿಗೆ ಪ್ರತಿಪಕ್ಷಗಳಿಂದಲೂ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.