ಅವಿಶ್ವಾಸ ನಿರ್ಣಯ ಚರ್ಚೆಗೆ ಭಿನ್ನಾಭಿಪ್ರಾಯ

ಅಮರಾವತಿ/ಅನಂತಪುರಂ ಜು.19-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಮಂಡಿಸಿರುವ ಅವಿಶ್ವಾಸ ನಿರ್ಣಯ ಚರ್ಚೆಗೆ ಮುನ್ನವೇ ಪಕ್ಷದಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಈ ನಿರ್ಣಾಯಕ ಅಧಿವೇಶನದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಅದೇ ಪಕ್ಷದ ಸಂಸದ ಜೆ.ಸಿ.ದಿವಾಕರ್ ರೆಡ್ಡಿ ಸ್ಪಷ್ಟಪಡಿಸಿರುವುದು ಟಿಡಿಪಿಗೆ ಹಿನ್ನೆಡೆಯಾಗಿದೆ.
ಸಂಸತ್ತಿನ ಮುಂಗಾರು ಅಧಿವೇಶದ ಲೋಕಸಭಾ ಕಲಾಪಕ್ಕೆ ನಿನ್ನೆ ಗೈರು ಹಾಜರಾಗಿದ್ದ ಅನಂತಪುರಂ ಸಂಸದ ರೆಡ್ಡಿ, ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯಲ್ಲಿ ನಾನು ಭಾಗವಹಿಸುವುದಿಲ್ಲ. ಅಷ್ಟೇ ಅಲ್ಲ ಇಡೀ ಮಾನ್ಸೂನ್ ಸೆಷನ್‍ನಲ್ಲೂ ನಾನು ಗೈರು ಹಾಜರಾಗುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಟಿಡಿಪಿಗೆ ಹೊಸ ಸಮಸ್ಯೆ ಎದುರಾಗಿದೆ. ಓಡಿಪಿ ಮತ್ತು ಕೇಂದ್ರ ಸರ್ಕಾರದ ನಡುವಣ ತಿಕ್ಕಾಟದಿಂದ ಸಾಕಾಗಿ ಹೋಗಿದೆ. ನಾನು ನಿರ್ಣಾಯಕ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ. ಸಂಸತ್ ಅಧಿವೇಶನಕ್ಕೂ ಹೋಗುವುದಿಲ್ಲ. ಪಕ್ಷದ ವಿಪ್ ಸೂಚನೆಯನ್ನು ನಾನು ಉಲ್ಲಂಘಿಸಿದ್ದೇನೆ ನಿಜ. ಆದರೆ ರಾಜಕೀಯ ವ್ಯವಸ್ಥೆಯಿಂದ ನನಗೆ ತೀವ್ರ ಬೇಸರವಾಗಿದೆ. ನಾನು ನನ್ನ ಹುಟ್ಟೂರು ಅನಂತಪುರಂನಲ್ಲಿದ್ದೇನೆ. ಒಂದು ವಾರದ ನಂತರ ನನ್ನ ಅಭಿಪ್ರಾಯಗಳನ್ನು ನಾನು ಮಾಧ್ಯಮದ ಮುಂದೆ ತಿಳಿಸುತ್ತೇನೆ ಎಂದು ನಿನ್ನೆ ರಾತ್ರಿ ಅನಂತಪುರಂನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನನಗೆ ಹಿಂದಿ ಅಥವಾ ಇಂಗ್ಲಿಷ್ ಬರುವುದಿಲ್ಲ. ನಾನೂ ನನ್ನ ಅನುಪಸ್ಥಿತಿ ಅಥವಾ ಗೈರು ಹಾಜರಿಯಿಂದ ತೊಂದರೆ ಇಲ್ಲ. ಪಕ್ಷ ಮತ್ತು ಕೇಂದ್ರದ ಹಗ್ಗ-ಜಗ್ಗಾಟ ನನಗೆ ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.
ಟಿಡಿಪಿ ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತು ಲೋಕಸಭೆಯಲ್ಲಿ ನಾಳೆ ಚರ್ಚೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವಕಾಶ ನೀಡಿದ್ದಾರೆ. ಜು.23ರಂದು ರಾಜ್ಯಸಭೆಯಲ್ಲಿ ಈ ಗೊತ್ತುವಳಿ ಚರ್ಚೆಯಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ