ಕಾಂಗ್ರೆಸ್ ನೀಡಿದ ಆಶ್ವಾಸನೆಗಳು ಈಡೇರಿಲ್ಲ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜು.19-ಹಿಂದಿನ ಸರ್ಕಾರಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2009ರ ವೇಳೆಗೆ ಎಲ್ಲ ಮನೆಗಳಿಗೂ ವಿದ್ಯುತ್ ಸೌಲಭ್ಯ ಕಲ್ಪಿಸುವುದಾಗಿ ವಾಗ್ದಾನ ನೀಡಿದ್ದರು. ಆದರೆ ಅವರು ಆಶ್ವಾಸನೆಯನ್ನು ಈಡೇರಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಹಿಂದಿನ ಸರ್ಕಾರಗಳು ಸಾಕಷ್ಟು ಭರವಸೆ-ಆಶ್ವಾಸನೆಗಳನ್ನು ನೀಡಿದ್ದವು. ಆದರೆ ಅವುಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾದವು. ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ 2009ರ ವೇಳೆಗೆ ದೇಶದ ಎಲ್ಲ ಮನೆಗಳು ವಿದ್ಯುದ್ಧೀಕರಣಗೊಳ್ಳಲಿದೆ ಎಂದು ಹೇಳಿದ್ದರು. ಆದರೆ 2009, 2010, 2011 ಆದರೂ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಮೋದಿ ಟೀಕಿಸಿದ್ದಾರೆ.
16,320 ಕೋಟಿ ರೂ. ವೆಚ್ಚದ ಪ್ರಧಾನಮಂತ್ರಿ ಸಹಜ್ ಬಿಜಿಲಿ ಹರ್ ಘರ್ ಯೋಜನೆ (ಸೌಭಾಗ್ಯ) ಫಲಾನುಭವಿಗಳೊಂದಿಗೆ ಇಂದು ಸಂವಾದದ ವೇಳೆ ಮೋದಿ ಹಿಂದಿನ ಕಾಂಗ್ರೆಸ್ ಮತ್ತು ಆಗಿನ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಈ ಹಿಂದೆ ಇದ್ದ ನಾಯಕರು ಗಂಭೀರ ಚಿಂತನೆಯ ನಾಯಕರಲ್ಲದ ಕಾರಣ ಆಗಿನ ಸರ್ಕಾರಗಳ ವಾಗ್ದಾನಗಳು ಈಡೇರಲಿಲ್ಲ. ಈಗ ಅವರು (ವಿರೋಧ ಪಕ್ಷ) ನಮ್ಮ ಸರ್ಕಾರ ಅನುಷ್ಠಾನಗೊಳಿಸಿರುವ ಉತ್ತಮ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿನ ತಪ್ಪುಗಳನ್ನು ಹುಡುಕುತ್ತಿವೆ ಎಂದು ಮೋದಿ ಟೀಕಿಸಿದರು. ಏಪ್ರಿಲ್ 18,2018ರ ವೇಳೆಗೆ ದೇಶದ ಎಲ್ಲ ಗ್ರಾಮಗಳು ವಿದ್ಯುದ್ಧೀಕರಣಗೊಂಡಿವೆ. ಇದೊಂದು ಚಾರಿತ್ರಿಕ ದಿನ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾದರೂ ಜನರು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿದ್ದು ದುರದೃಷ್ಟಕರ ಎಂದು ಪ್ರಧಾನಿ ವಿಷಾದಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ