ಕೋಲಾರ:ಜು-19:ಬೆಳ್ಳಂದೂರು-ವರ್ತೂರು ಕೆರೆಗಳ ವಿಷಕಾರಕ ನೊರೆ ನೀರು ಕೋಲಾರಕ್ಕೂ ಆಗಮಿಸಿದ್ದು, ಜನತೆಯಲ್ಲಿ ಆತಂಕ ಮನೆ ಮಾಡಿದೆ. ಕೆಸಿ ವ್ಯಾಲಿ ಯೋಜನೆ ಕಾಮಗಾರಿ ಪೂರ್ಣಗೊಂಡ ನಂತರ ಜೂನ್ 2ರಿಂದ ಜಿಲ್ಲೆಗೆ ಪ್ರತಿನಿತ್ಯ ಸುಮಾರು 100 ಎಂಎಲ್‌ಡಿ ನೀರು ಹರಿದು ಬರುತ್ತಿತ್ತು. ನೀರಿನಿಂದ ಕೋಲಾರ ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆ ತುಂಬಿ ಕೋಡಿ ಹರಿದು ಉದ್ದಪ್ಪನಹಳ್ಳಿ, ಜೋಡಿ ಕೃಷ್ಣಾಪುರ, ನರಸಾಪುರ ಹಾಗೂ ದೊಡ್ಡವಲ್ಲಭಿ ಕೆರೆಗೆ ನೀರು ಹರಿಯುತ್ತಿತ್ತು. ಆದರೀಗ ಬೆಳ್ಳಂದೂರು-ವರ್ತೂರು ಕೆರೆಯಲ್ಲಿ ಸೃಷ್ಟಿಯಾಗಿದ್ದ ನೊರೆ ಈಗ ಲಕ್ಷ್ಮೀಸಾಗರ ಕೆರೆಯಲ್ಲೂ ಕಾಣಿಸಿದೆ.
ಕೋಲಾರ ತಾಲೂಕು ಲಕ್ಷ್ಮೀಸಾಗರ ಕೆರೆ ಹಾಗೂ ಸುತ್ತಮುತ್ತಲ ಗಾಳಿಯಲ್ಲಿ ನೊರೆ ಹಾರಾಡುತ್ತಿದೆ. ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಸಂಸ್ಕರಣ ಮಾಡದೇ ಹರಿಸದ ಕಾರಣ ನೊರೆ ಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕೋಲಾರ ಜಿಲ್ಲೆಯ ಅಂತರ್ಜಲ ವೃದ್ಧಿಸುವ ಸಲುವಾಗಿ, ಕೆರೆಗಳನ್ನು ತುಂಬಿಸುವ 1400 ಕೋಟಿ ವೆಚ್ಚದ ಯೋಜನೆ ಈ ಕೆ.ಸಿ.ವ್ಯಾಲಿ ಯೋಜನೆಯಾಗಿದೆ. ಸದ್ಯ ಮಲಿನವಾದ ನೊರೆ ನೀರನ್ನು ಹರಿಸುತ್ತಿರುವ ಪರಿಣಾಮ ಕೋಲಾರ ಜಿಲ್ಲೆಯ ಅಂತರ್ಜಲ ಹಾಗೂ ಕೆರೆಯ ನೀರು ಹಾಳಾಗುವ ಆತಂಕ ಎದುರಾಗಿದೆ.
ಸಧ್ಯ ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ಹರಿಸಲಾಗುತ್ತಿರುವ ಮಾರಕ ನೊರೆ ಮಿಶ್ರಿತ ನೀರನ್ನು ಅಧಿಕಾರಿಗಳು ತಕ್ಷಣವೇ ನಿಲ್ಲಿಸಿದ್ದಾರೆ.
bellanduru,varturu,kolara,k c vally