ಚಿಕ್ಕೋಡಿ,ಜು.18- ಮಹಾರಾಷ್ಟ್ರ ರಾಜ್ಯದ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಕೃಷ್ಣಾನದಿಗೆ ನೀರಿನ ಹರಿಯುವಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಯಭಾಗ ತಾಲ್ಲೂಕಿನ ಕುಡಚಿ ಉಗಾರದ ಮಧ್ಯ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಉಗಾರ-ಕುಡಚಿ ಸಂಪರ್ಕ ಕಡಿತವಾಗಿದೆ.
ಮಹಾರಾಷ್ಟ್ರದಿಂದ ಕೃಷ್ಣಾನದಿಗೆ 1.70 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ರಾಜಾಪೂರೆ ಬ್ಯಾರೇಜ್ನಿಂದ 1.12 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಅಲ್ಲದೆ ದೂಧಗಂಗಾ ನದಿಯಿಂದ 40 ಸಾವಿರ ಕ್ಯೂಸೆಕ್ನಷ್ಟು ನೀರು ಹರಿದುಬರುತ್ತಿದೆ. ಚಿಕ್ಕೋಡಿ ತಾಲ್ಲೂಕಿನ 7 ಸೇತುವೆಗಳು ಜಲಾವೃತಗೊಂಡಿವೆ. 4 ಅಡಿಯಷ್ಟು ನೀರು ಸೇತುವೆಗಳ ಮೇಲೆ ಹರಿಯುತ್ತಿರುವುದರಿಂದ ಸಂಚಾರಕ್ಕೆ ಪರದಾಡುವಂತಾಗಿದೆ. ಬಾಗಲಕೋಟೆ, ಜಮಖಂಡಿ, ರಾಯಭಾಗ, ಹಾರೋಗೇರಿ ಪಟ್ಟಣದ ಜನರು ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ಈ ಸೇತುವೆ ಮೂಲಕವೇ ಹೋಗಬೇಕಾಗಿದೆ. ಆದರೆ ಇದೀಗ ಜಲಾವೃತವಾಗಿರುವುದರಿಂದ ಜನರು ಪರದಾಡುತ್ತಿದ್ದು, 50 ಕಿ.ಮೀ ಬಳಸಿ ಅಥಣಿ ಮಾರ್ಗವಾಗಿ ಹೋಗುತ್ತಿದ್ದಾರೆ. ಭಾರೀ ಮಳೆಯಿಂದಾಗಿ ಅಥಣಿ, ಚಿಕ್ಕೋಡಿ, ರಾಯಭಾಗ ತಾಲ್ಲೂಕುಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.