ಬೆಂಗಳೂರು, ಜು.18- ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 18 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಸೂಚನೆ ನೀಡಿದೆ.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಪ್ರದೇಶಗಳಿಗೆ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಇಮ್ರಾನ್ ಪಾಷ ಅವರು ಈ ಸೂಚನೆ ನೀಡಿದರು.
ಈ ಕ್ಷೇತ್ರದಲ್ಲಿ ಒಟ್ಟು 9 ವಾರ್ಡ್‍ಗಳಿದ್ದು 2017-18ನೆ ಸಾಲಿನಲ್ಲಿ ಕೈಗೊಳ್ಳಬೇಕಾದ ತಲಾ 2 ಕೋಟಿ ವೆಚ್ಚದ ಪಿಒಡಬ್ಲ್ಯು ಕಾಮಗಾರಿಗಳನ್ನು ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಕೆಲವು ವಾರ್ಡ್‍ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯದೆ ಇರುವುದು ಕಂಡು ಬಂತು. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕೂಡಲೇ ಎಲ್ಲಾ ಕಾಮಗಾರಿಗಳನ್ನು ಆರಂಭಿಸಬೇಕು. ಮುಂದಿನ ತಪಾಸಣೆ ವೇಳೆಗೆ ಕಾಮಗಾರಿ ಆರಂಭವಾಗದಿದ್ದರೆ ಕ್ರಮ ಕೈಗೊಳ್ಳುವುದಾಗಿ ಇಮ್ರಾನ್ ಪಾಷ ಅವರು ಅಭಿಯಂತರರಿಗೆ ಎಚ್ಚರಿಕೆ ನೀಡಿದರು.
ಸಾರ್ವಜನಿಕರು ನೀಡುವ ದೂರನ್ನು ದಾಖಲಿಸಿಕೊಳ್ಳಲು ಪ್ರತ್ಯೇಕ ರಿಜಿಸ್ಟ್ರಾರ್ ಕರೆಯಬೇಕು. ಸದರಿ ದೂರುಗಳಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಕಚೇರಿಯಲ್ಲಿ ನಿರ್ವಹಣೆ ಮಾಡಬೇಕಾದ ಬಿಆರ್ ಬುಕ್, ಕ್ಯಾಶ್ ರಿಜಿಸ್ಟ್ರಾರ್‍ನಲ್ಲಿ ಕಾರ್ಯಪಾಲಕ ಅಭಿಯಂತರರ ಸಹಿ ಇಲ್ಲದಿರುವುದು ಕಂಡು ಬಂತು.
ಕೂಡಲೇ ಸಂಬಂಧಪಟ್ಟ ಅಭಿಯಂತರರಿಂದ ಸಹಿ ಪಡೆದು ಬಿಆರ್ ಪುಸ್ತಕದಲ್ಲಿ ನಮೂದಿಸುವಂತೆ ಎಚ್ಚರಿಕೆ ನೀಡಲಾಯಿತು.
ಪರಿಶೀಲನೆ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಸದಸ್ಯರಾದ ಶ್ವೇತ ವಿಜಯಕುಮಾರ್, ಹೇಮಲತಾ ಸತೀಶ್, ಯಶೋಧಾ, ಭುವನೇಶ್ವರಿ, ಮಂಜುಳಾ, ನೇತ್ರಾ ಪಲ್ಲವಿ ಮತ್ತಿತರರು ಹಾಜರಿದ್ದರು.