ಬಾದಾಮಿಯಲ್ಲಿ ಪ್ರವಾಸ ಕೈಗೊಂಡ ಸಿದ್ಧರಾಮಯ್ಯ

ಬಾದಾಮಿ, ಜು.18-ಸ್ವಕ್ಷೇತ್ರ ಬಾದಾಮಿಯಲ್ಲಿ ಮತ್ತೆ ಪ್ರವಾಸ ಪ್ರಾರಂಭಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಳೇ ಖದರ್‍ನಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೃಷ್ಣ ಹೆರಿಟೇಜ್‍ನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿದ್ದರಾಮಯ್ಯ ನಂತರ ನಂದಿಕೇಶ್ವರ, ಶಿರಬಡಗಿ ಗ್ರಾಮಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಿದರು.
ಬಿ.ಎನ್.ಜಾಲಿಹಾಳ ಗ್ರಾಮಕ್ಕೆ ಅವರು ಬಂದಾಗ ರಸ್ತೆಗುಂಡಿಗಳು, ಸ್ವಚ್ಛ ಪಡಿಸದ ಚರಂಡಿಗಳು ಕಣ್ಣಿಗೆ ರಾಚಿದವು. ಇದನ್ನು ಕಂಡ ತಕ್ಷಣ ಗರಂ ಆದ ಸಿದ್ದರಾಮಯ್ಯ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.
ಮಳೆ ಸುರಿಯುತ್ತಲೇ ಇದೆ. ಚರಂಡಿಗಳನ್ನು ಸ್ವಚ್ಛ ಪಡಿಸಿಲ್ಲ. ರಸ್ತೆಗಳು ಗುಂಡಿ ಬಿದ್ದು ನೀರು ತುಂಬಿಕೊಂಡಿವೆ. ಗ್ರಾಮಸ್ಥರು ಬದುಕುವುದಾದರೂ ಹೇಗೆ? ಸರಿಯಾಗಿ ಕೆಲಸ ಮಾಡದೆ ಏನು ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು. ಕೂಡಲೇ ಗ್ರಾಮದಲ್ಲಿನ ಚರಂಡಿಗಳ ಹೂಳು ತೆಗೆಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿ. ರಸ್ತೆ ಗುಂಡಿಗಳನ್ನು ಮುಚ್ಚಿ ಸ್ವಚ್ಛತೆಯನ್ನು ಕಾಪಾಡಿ. ಗ್ರಾಮ ನೈರ್ಮಲ್ಯ ಇದ್ದರೆ ತಾನೇ ಜನರು ಆರೋಗ್ಯದಿಂದಿರಲು ಸಾಧ್ಯ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲಿಂದ ನಂದಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಕಾಂಗ್ರೆಸ್ ಮುಖಂಡ ಮುಚಖಂಡಯ್ಯ ಹಂಗರಗಿ ಅವರ ಮನೆಗೆ ಭೇಟಿ ಕೊಟ್ಟು ಅವರಿಗೆ ಸಾಂತ್ವಾನ ಹೇಳಿದರು. ಇತ್ತೀಚೆಗೆ ಹಂಗರಗಿ ಅವರ ಮಾತೃಶ್ರೀ ನಿಧನ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬ ವರ್ಗಕ್ಕೆ ಸಿದ್ದರಾಮಯ್ಯ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಆರ್.ಬಿ.ತಿಮ್ಮಾಪುರ್, ಎಚ್.ವೈ.ಮೇಟಿ, ಮುಖಂಡ ದೇವರಾಜ ಪಾಟೀಲ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ