
ಫಿನ್ಲ್ಯಾಂಡ್: ಇದು ಸಾಮಾನ್ಯವಾದ ಸುದ್ದಿಗೋಷ್ಠಿಯಾಗಿರಲಿಲ್ಲ… ವಿಶ್ವದ ಎರಡು ಬಲಾಢ್ಯ ರಾಷ್ಟ್ರಗಳು ಅಲ್ಲಿ ಸಮಾಗಮಗೊಂಡಿದ್ದವು. ಈ ಎರಡೂ ರಾಷ್ಟ್ರಗಳು ಏನು ಹೇಳಲಿವೆ ಎಂದು ಇಡೀ ವಿಶ್ವ ತುದಿಗಾಲಲ್ಲಿ ನಿಂತು ಕಾಯುತ್ತಿತ್ತು.
ಜಗತ್ತಿನ ಬಲಾಢ್ಯ ರಾಷ್ಟ್ರಗಳಾದ ಅಮೆರಿಕಾ ಹಾಗೂ ರಷ್ಯಾ ಹಾವು-ಮುಂಗುಸಿಯಂತೆ ಬದ್ಧ ವೈರಿಗಳು ಎಂದು ಹಲವು ರೀತಿಯಲ್ಲಿ ತೋರಿಸಿಕೊಟ್ಟಿವೆ. ಆದರೆ, ಅದೆಲ್ಲವನ್ನೂ ಮರೆತು ಪರಸ್ಪರ ಹಸ್ತಲಾಘವ ಮಾಡಿ, ಅನುಭವ, ಅನಿಸಿಕೆಗಳನ್ನು ಎರಡೂ ರಾಷ್ಟ್ರಗಳ ನಾಯಕರು ಹಂಚಿಕೊಂಡರು.
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ವಿಶ್ವದ ಅಚ್ಚರಿಗೆ ಕಾರಣರಾದರು. ಫಿನ್ಲ್ಯಾಂಡ್ನ ಹೆಲ್ಸಿಂಕಿಯಲ್ಲಿ ನಡೆದ ಈ ಅವಿಸ್ಮರಣೀಯ ಗೋಷ್ಠಿಯಲ್ಲಿ ಉಭಯ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಹೋರಾಟ ಹಾಗೂ ಪರಸ್ಪರ ಸಹಕಾರದ ಬಗ್ಗೆ ಮಾತನಾಡಿದವು.
ಪ್ರಮುಖಾಂಶಗಳು:
-ರಷ್ಯಾ ನನ್ನ ಕುಟಂಬದ ಬಗ್ಗೆ ಗೌಪ್ಯ ಮಾಹಿತಿ ಕಲೆಹಾಕುತ್ತಿದೆ ಎಂಬುದು ಸುಳ್ಳು – ಟ್ರಂಪ್
-ಮಾಸ್ಕೋದಲ್ಲಿದ್ದಾಗ ಟ್ರಂಪ್ ಹಾಗೂ ಅವರ ಕುಟುಂಬದ ಮಾಹಿತಿಯನ್ನು ಪಡೆಯುತ್ತಿರುವ ವದಂತಿ ಹಬ್ಬಿತ್ತು. ಆದರೆ, ಅಲ್ಲಿಗೆ ಟ್ರಂಪ್ ಬಂದಿರುವುದೂ ಗೊತ್ತಿರಲಿಲ್ಲ – ಪುಟಿನ್
– ರಷ್ಯಾ ಹಾಗೂ ಅಮೆರಿಕಾ ಎರಡೂ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ. ಚುನಾವಣೆಯಂತಹ ಸಂಗತಿಗಳು ಕಾನೂನಾತ್ಮಕ ನ್ಯಾಯಾಲಯಗಳಿಂದ ನಿರ್ಧರಿಸಲ್ಪಡುತ್ತವೆ ಎಂದ ವ್ಲಾಟಮಿರ್, ಟ್ರಂಪ್ಗೆ ಫುಟ್ಬಾಲ್ ನೀಡಿ ‘ಈ ಚೆಂಡು ನಿಮ್ಮ ಅಂಗಳದಲ್ಲಿದೆ’ ಎಂದರು.
-ನಮ್ಮ ಸೇನೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಿರಿಯಾ ಹಾಗೂ ಮುಂತಾದ ಪ್ರದೇಶಗಳ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದೆ – ಟ್ರಂಪ್
– ನಾವು ಸತ್ಯ ಸಂಗತಿಯಿಂದ ಮಾತ್ರ ನಿರ್ದೇಶಿಲ್ಪಡುತ್ತೇವೆ. ಎರಡೂ ದೇಶಗಳ ನಡುವಿನ ಒಪ್ಪಂದದ ಮೂಲಕ ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ – ಪುಟಿನ್
– ಉಭಯ ರಾಷ್ಟ್ರಗಳಲ್ಲಿ ಶೇ. 90ರಷ್ಟು ಅಣ್ವಸ್ತ್ರಶಕ್ತಿಯನ್ನು ಹೊಂದಿದ್ದು, ಕ್ರಮೇಣ ಕಡಿಮೆ ಮಾಡಲಿದ್ದೇವೆ – ಟ್ರಂಪ್
– ಜಾಗತಿಕ ಮಾರುಕಟ್ಟೆಯ ನಿಯಂತ್ರಣಕ್ಕಾಗಿ ನಾವು ಜೊತೆಯಾಗಿ ಕೆಲಸ ಮಾಡಲಿದ್ದೇವೆ – ಪುಟಿನ್
– ಜಾಗತಿಕ ಇಸ್ಲಾಮಿಕ್ ಭಯೋತ್ಪಾದನೆಯ ಉಪಟಳದ ಬಗ್ಗೆ ಚರ್ಚಿಸಿದ್ದೇವೆ. ಐಎಸ್ಐಎಸ್ ನಿರ್ಮೂಲನೆಗೆ ಕಟಿಬದ್ಧರಾಗಿದ್ದೇವೆ – ಟ್ರಂಪ್