ಬೆಂಗಳೂರು, ಜು.17- ಲೋಕಸಭಾ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ನಡುವೆ ಸೀಟುಗಳ ಹಂಚಿಕೆ ಸಂಬಂಧ ನಾಳೆ ನವದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆಯಲಿದೆ.
ನಾಳೆ ದೆಹಲಿಯಲ್ಲಿ ಕಾವೇರಿ ವಿವಾದದ ವಿಷಯವಾಗಿ ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಎಲ್ಲಾ ಪಕ್ಷಗಳ ಸಂಸದರ ಸಭೆ ಕರೆದಿದ್ದಾರೆ.
ಸಭೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್‍ನ ವರಿಷ್ಠ ನಾಯಕರು ಭೇಟಿಯಾಗಲಿದ್ದು, ಲೋಕಸಭೆ ಚುನಾವಣೆಯ ಸೀಟು ಹಂಚಿಕೆ, ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ ಕುರಿತು ಚರ್ಚೆಯಾಗಲಿದೆ.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಕಾಂಗ್ರೆಸ್ ಕೂಡ ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಮೈತ್ರಿ ಏರ್ಪಡುವುದಾದರೆ ಜೆಡಿಎಸ್‍ಗಿಂತಲೂ ಕಾಂಗ್ರೆಸ್‍ಗೆ ಹೆಚ್ಚು ನಷ್ಟ. ಹೀಗಾಗಿ ಲೋಕಸಭೆ ಚುನಾವಣಾ ಮೈತ್ರಿ ಬೇಡ ಎಂದು ಕೆಲ ಸಂಸದರು ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.
ಅದರ ನಡುವೆಯೂ ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕು. ಬಿಜೆಪಿಯನ್ನು ಸೋಲಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತಿತರ ನಾಯಕರು ಜೆಡಿಎಸ್ ಜತೆಗಿನ ಮೈತ್ರಿಯ ಪರವಾಗಿದ್ದಾರೆ.
ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ನಿಗದಿ ಮಾಡಿಕೊಂಡಿದೆ. ಅದಕ್ಕೆ ಎದುರಾಗಿ ಕಾಂಗ್ರೆಸ್ 20ರಿಂದ 22 ಸ್ಥಾನಗಳಲ್ಲಿ ಗೆಲ್ಲುವ ಕಾರ್ಯತಂತ್ರ ರೂಪಿಸಿದೆ.
20-8 ಸ್ಥಾನಗಳ ಹಂಚಿಕೆ:
ಜೆಡಿಎಸ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಗೆದ್ದಿದ್ದು, ಈ ಬಾರಿ ಆಡಳಿತಾರೂಢ ಪಕ್ಷವಾಗಿರುವುದರಿಂದ ಕನಿಷ್ಠ 6ರಿಂದ 7 ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿಯನ್ನು ಜೆಡಿಎಸ್ ಹೊಂದಿದೆ.
ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ 20 ಮತ್ತು 8 ಸೀಟುಗಳ ಹಂಚಿಕೆಗೆ ಚರ್ಚೆ ನಡೆಯುತ್ತಿದೆ. ಜೆಡಿಎಸ್ ತುಮಕೂರು, ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬಾಗಲಕೋಟೆ, ರಾಯಚೂರು, ಧಾರವಾಡ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಮುಂದಿಟ್ಟಿದೆ.
ಈ ಎಂಟು ಕ್ಷೇತ್ರಗಳ ಪೈಕಿ ಕಾಂಗ್ರೆಸ್‍ನಿಂದ ತುಮಕೂರಿಲ್ಲಿ ಎಸ್.ಪಿ.ಮುದ್ದಹನುಮೇಗೌಡ, ರಾಯಚೂರಿನಲ್ಲಿ ಬಿ.ವಿ.ನಾಯಕ್ ಸಂಸದರಾಗಿದ್ದಾರೆ. ಉಳಿದಂತೆ ಧಾರವಾಡ, ಮೈಸೂರು, ಶಿವಮೊಗ್ಗ, ಬಾಗಲಕೋಟೆ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದು, ಮಂಡ್ಯ, ಹಾಸನದಲ್ಲಿ ಜೆಡಿಎಸ್ ಸಂಸದರಿದ್ದಾರೆ.
ಮಂಡ್ಯದಿಂದ ಅಂಬರೀಶ್ ಅವರಿಗೆ ಟಿಕೆಟ್ ಕೊಡಲು ಜೆಡಿಎಸ್ ಚಿಂತನೆ ನಡೆಸಿದೆ. ಅಂಬರೀಶ್ ಪ್ರಸ್ತುತ ಕಾಂಗ್ರೆಸ್‍ನಲ್ಲಿದ್ದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದೆ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.
ಶಿವಮೊಗ್ಗದಿಂದ ಮಧುಬಂಗಾರಪ್ಪ ಅವರಿಗೆ, ಬಾಗಲಕೋಟೆಯಿಂದ ಪಿ.ಜಿ.ಆರ್.ಸಿಂಧ್ಯಾ ಅವರಿಗೆ , ತುಮಕೂರಿನಿಂದ ಸಿ.ಚೆನ್ನಿಗಪ್ಪ ಅವರಿಗೆ, ರಾಯಚೂರಿನಿಂದ ರೇವುನಾಯಕ್ ಬೆಳಮಗಿ ಅವರಿಗೆ ಟಿಕೆಟ್ ನೀಡಲು ಜೆಡಿಎಸ್ ಚಿಂತನೆ ನಡೆಸಿದೆ.
ಕಾಂಗ್ರೆಸ್ ತುಮಕೂರು, ಮೈಸೂರು, ರಾಯಚೂರು ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದೆ. ಹೀಗಾಗಿ ನಾಳೆ ನಡೆಯುವ ಚರ್ಚೆಯಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.
ದೋಸ್ತಿ ಪಕ್ಷಗಳಿಗೆ ಲೋಕಸಭೆ ಚುನಾವಣೆ ಅಗ್ನಿ ಪರೀಕ್ಷೆಯಾಗಿದ್ದು, ಇಲ್ಲಿ ಬಿಜೆಪಿಯನ್ನು ಹತ್ತಿಕ್ಕುವುದು ಅನಿವಾರ್ಯವಾಗಿದೆ. ಇಲ್ಲವಾದರೆ ಅದು ರಾಜ್ಯ ಸರ್ಕಾರದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ.