ಬೆಂಗಳೂರು, ಜು.17- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಇದೇ ಜು.28ರಂದು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಪ್ರಮುಖ ತೀರ್ಮಾನಗಳ ಬಗ್ಗೆ ಚರ್ಚಿಸಲು 21ರಂದು ಪಕ್ಷದ ಪ್ರಮುಖರ ಕೋರ್ ಕಮಿಟಿ ಸಭೆ ಕರೆಯಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಗೆ ಕೋರ್ ಕಮಿಟಿ ಸದಸ್ಯರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ನಳಿನ್ ಕುಮಾರ್ ಕಟೀಲ್, ಈಶ್ವರಪ್ಪ , ಆರ್.ಅಶೋಕ್ ಸೇರಿದಂತೆ ಮತ್ತಿತರ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ರಾಜ್ಯ ಘಟಕದ ನಾಯಕರ ಜತೆ ಚರ್ಚಿಸಲು ಅಮಿತ್ ಷಾ 28ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ವಿಧಾನಸಭೆ ಚುನಾವಣೆ ಮುಗಿದ ಬಳಿಕ ಮೊದಲ ಬಾರಿಗೆ ಅಮಿತ್ ಷಾ ನಗರಕ್ಕೆ ಆಗಮಿಸುತ್ತಿರುವುದರಿಂದ ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ.
ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೆಲವು ಆಕಾಂಕ್ಷಿಗಳು ಟಿಕೆಟ್ ಖಾತರಿ ಪಡಿಸಿಕೊಳ್ಳಲು ಹವಣಿಸುತ್ತಿದ್ದರೆ ಮತ್ತೊಂದೆಡೆ ಹಾಲಿ ಸದಸ್ಯರಿಗೆ ಟಿಕೆಟ್ ಕೈ ತಪ್ಪಲಿದೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.
ಆದರೆ ಟಿಕೆಟ್ ಘೋಷಣೆಯಾಗುವವರೆಗೂ ಗುಟ್ಟು ಬಿಟ್ಟು ಕೊಡದ ಅಮಿತ್ ಷಾ ಈವರೆಗೂ 28 ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕು. ಯಾರನ್ನು ಯಾವ ಕ್ಷೇತ್ರದಿಂದ ಕಣಕ್ಕಿಳಿಸಬೇಕು. ವಿಧಾನಸಭೆ ಚುನಾವಣೆಯಲ್ಲಿ ಕೈಗೊಂಡಂತಹ ತಂತ್ರಗಳನ್ನೇ ಅನುಸರಿಸಬೇಕೇ ಇಲ್ಲವೇ ಹೊಸ ಕಾರ್ಯ ವಿಧಾನವನ್ನು ಹೆಣೆಯಬೇಕೇ ಎಂಬುದರ ಬಗ್ಗೆ ಸ್ಥಳೀಯರ ನಾಯಕರ ಜತೆ ಸುದೀರ್ಘ ಚರ್ಚೆ ಮಾಡುವರು.
ಇನ್ನು 21ರಂದು ಯಡಿಯೂರಪ್ಪ ಕರೆದಿರುವ ಕೋರ್ ಕಮಿಟಿ ಸಭೆಯಲ್ಲಿ ಕೆಲವು ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ.
ವಿಧಾನಸಭೆ ಚುನಾವಣೆಯಲ್ಲಿ ಉಂಟಾದ ಹಿನ್ನಡೆ ನಿರೀಕ್ಷಿತ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗದಿರುವುದು, ರಾಜಧಾನಿ ಬೆಂಗಳೂರು , ಬಳ್ಳಾರಿ, ಬೀದರ್, ವಿಜಯಪುರ ಹಾಗೂ ಬೆಳಗಾವಿಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬಾರದಿರುವ ಬಗ್ಗೆಯೂ ಯಡಿಯೂರಪ್ಪ ಮಾಹಿತಿ ಪಡೆಯಲಿದ್ದಾರೆ.
ವಿಧಾನಸಭೆ ಚುನಾವಣೆ ಮುನ್ನ ಮಿಷನ್-150 ಎಂದು ಹೇಳಿದ್ದರೂ ಬಿಜೆಪಿ ತಲುಪಿದ್ದು 104. ಗೆದ್ದೇ ಗೆಲ್ಲುತ್ತೇವೆ ಎಂದು ಅತಿಯಾದ ಆತ್ಮ ವಿಶ್ವಾಸ ಇಟ್ಟುಕೊಂಡಿದ್ದ ಕ್ಷೇತ್ರಗಳಲ್ಲಿ ಯಾವ ಕಾರಣಕ್ಕಾಗಿ ಸೋಲು ಉಂಟಾಯಿತು. ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ ಅಭ್ಯರ್ಥಿ ಸೋಲಿಗೆ ಕಾರಣ ಸೇರಿದಂತೆ ಮತ್ತಿತರ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸುವರು.
ಪಕ್ಷದ ಬೆಳವಣಿಗೆಗಳ ಬಗ್ಗೆ ಆಂತರಿಕ ವರದಿ ನೀಡಬೇಕೆಂದು ಖುದ್ದು ಅಮಿತ್ ಷಾ ಅವರೇ ಸೂಚನೆ ಕೊಟ್ಟಿರುವುದರಿಂದ ಯಡಿಯೂರಪ್ಪ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ.