ಬೆಂಗಳೂರು, ಜು.17- ಇಂದು ಬೆಳ್ಳಂ ಬೆಳಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ 8 ಕಡೆಗಳಲ್ಲಿ ಮೂವರು ಹಿರಿಯ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ.
ಕುಮಾರ ಕೃಪಾ ಪಶ್ಚಿಮ ರೈಲ್ವೆ ಸಮಾನಾಂತರ ರಸ್ತೆಯಲ್ಲಿರುವ ಕೈ ಮಗ್ಗ ಹಾಗೂ ಜವಳಿ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಜಂಟಿ ನಿರ್ದೇಶಕರು ಹಾಗೂ ಗೆಜೆಟೆಡ್ ಅಸಿಸ್ಟೆಂಟ್ ವಿಜಯಕುಮಾರ್ ನಿಖಾಲಿ ಅವರ ರಾಜಾಜಿನಗರ ಹಾಗೂ ಉತ್ತರ ಕರ್ನಾಟಕದಲ್ಲಿರುವ ಅವರ ಒಡೆತನದ 2 ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಕಚೇರಿಯಲ್ಲೂ ಕೂಡ ಕೆಲವು ದಾಖಲಾತಿಗಳನ್ನು ಪರಿಶೀಲಿಸಲಾಗಿದ್ದು , ಇವರ ಬಳಿ ಹಲವು ನಿವೇಶನಗಳ ದಾಖಲಾತಿಗಳು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಇದೇ ಇಲಾಖೆಯ ಕೆಜಿ ರಸ್ತೆಯಲ್ಲಿರುವ ಉಪ ನಿರ್ದೇಶಕರ ಗಂಗಯ್ಯ ಅವರ ಚನ್ನರಾಯಪಟ್ಟಣ ತಾಲ್ಲೂಕಿನ ದೊಡ್ಡನಕೆರಿ ಗ್ರಾಮದಲ್ಲಿರುವ ತೋಟದ ಮನೆ ಮತ್ತು ಬ್ಯಾಡರಹಳ್ಳಿಯ ಹೆಲ್ತ್ ಲೇ ಔಟ್‍ನಲ್ಲಿರುವ ಅವರ ವಾಸದ ಮನೆ ಮೇಲೆ ಹಾಗೂ ಕಚೇರಿ ಮೇಲೆ ಏಕ ಕಾಲಕ್ಕೆ ಎಸಿಬಿ ಎಸ್ಪಿಯವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇಲ್ಲೂ ಕೂಡ ಹಲವು ದಾಖಲಾತಿಗಳು ಹಾಗೂ ಬ್ಯಾಂಕ್‍ನಲ್ಲಿ ಹೂಡಿಕೆ ಮತ್ತಿತರ ಚರಾಚರ ಆಸ್ತಿಗಳನ್ನು ಪತ್ತೆ ಹಚ್ಚಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆಯ ಸಾಮಾಜಿಕ ಎಸಿಎಫ್ (ಸಾಮಾಜಿಕ ಅರಣ್ಯ ವಿಭಾಗದ ) ಕೆ.ಎಚ್.ರಂಗನಾಥ್ ಅವರ ಚಿಕ್ಕಮಗಳೂರಿನಲ್ಲಿರುವ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ. ಇಲ್ಲಿ ಹಲವು ಕಡೆ ಖರೀದಿಸಿದ ನಿವೇಶನಗಳ ಕಾಗದ ಪತ್ರಗಳು ದೊರೆತಿದೆ ಎಂದು ತಿಳಿದು ಬಂದಿದೆ. ಮತ್ತು ವಿವಿಧ ಬ್ಯಾಂಕ್‍ಗಳಲ್ಲಿ ಹೂಡಿಕೆ ಮಾಡಿರುವುದು ಕೂಡ ಗೊತ್ತಾಗಿದೆ.
ದಾಳಿಯಲ್ಲಿ ಪರಿಶೀಲನೆ ಇನ್ನು ನಡೆಯುತ್ತಿದ್ದು , ಅಕ್ರಮ ಆಸ್ತಿ ಸಂಪಾದನೆ ಕುರಿತಂತೆ ಅಂದಾಜು ಲೆಕ್ಕ ಹಾಕಲಾಗುತ್ತಿದೆ ಮತ್ತು ಇವರ ವಿರುದ್ಧ ಎಸಿಬಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.