ಬೆಂಗಳೂರು,ಜು.16- ರಾಮನಗರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಕಟ್ಟಡ, ಜಿಲ್ಲಾ ಪಾಲಿ ಕ್ಲಿನಿಕ್, ವಿವಿಧ ಕಾಲೇಜುಗಳ ಹೆಚ್ಚುವರಿ ತರಗತಿ ಕೊಠಡಿ ಸೇರಿದಂತೆ ಸುಮಾರು 47 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಶಂಕುಸ್ಥಾಪನೆ ನೆರವೇರಿಸಿದರು.
ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಕಾಲೇಜುಗಳ ಹೆಚ್ಚುವರಿ ಕೊಠಡಿ, ಗ್ರಾಂಥಾಲಯ ಕಟ್ಟಡ , ಪ್ರಯೋಗಾಲ ನಿರ್ಮಾಣಕ್ಕೆ ಸಂಬಂಧಿಸಿದ 2.20 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅವರು ಶಿಲ್ಯಾನಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಉಪಸ್ಥಿತರಿದ್ದರು.
92 ಲಕ್ಷ ರೂ. ವೆಚ್ಚದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಕಟ್ಟಡ, 205 ಲಕ್ಷ ವೆಚ್ಚದ ಪಶುವೈದ್ಯಕೀಯ ಇಲಾಖೆಯ ಜಿಲ್ಲಾ ಪಾಲಿ ಕ್ಲಿನಿಕ್ ಕಟ್ಟಡ, 2 ಕೋಟಿ ರೂ. ವೆಚ್ಚದ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಮಹಿಳಾ ವಿದ್ಯಾರ್ಥಿ ನಿಲಯ ಹಾಗೂ ನಗರೋತ್ಥಾನ ಮೂರನೇ ಹಂತದಲ್ಲಿ ನಗರದ ಸೀರೆಹಳ್ಳದ ತಡೆಗೋಡ ನಿರ್ಮಾಣ, ರಸ್ತೆ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕುಮಾರಸ್ವಾಮಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ 245 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಸ್ಕಾಂ ಉಪವಿಭಾಗ ಕಚೇರಿ ಕಟ್ಟಡ, ಬನ್ನಿಗುಪ್ಪೆ ಮತ್ತು ತೈಲಂಚ ಗ್ರಾಮಗಳಲ್ಲಿ ತಲಾ 40 ರೂ. ವೆಚ್ಚದಲ್ಲಿ ನಿರ್ಮಿಸಿರುವ ಶಾಖಾ ಕಚೇರಿಗಳನ್ನು ಉದ್ಘಾಟಿಸಿದರು.
ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವೆಬ್‍ಸೈಟ್‍ಗೂ ಚಾಲನೆ ನೀಡಿದ ಮುಖ್ಯಮಂತ್ರಿಗಳು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ವೇಳೆ ವಿಶ್ವವಿದ್ಯಾಲಯಕ್ಕೆ ಜಮೀನು ನೀಡುವ ವಿಚಾರದಲ್ಲಿ ನ್ಯಾಯಾಲಯದ ಮೋರೆ ಹೋಗಿರುವ ರೈತರೊಂದಿಗೆ ಮುಖ್ಯಮಂತ್ರಿ ಹಾಗೂ ಸಚಿವರುಕೆಲ ಕಾಲ ಸಮಾಲೋಚನೆ ನಡೆಸಿದರು.
ನಂತರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಸಂಜೆ ಜಿಲ್ಲಾ ಮಟ್ಟದ ಅಧಿಕಾರಿಗಳ ಪರಿಶೀಲನಾ ಸಭೆಯನ್ನು ನಡೆಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ರಾಮನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಡೀ ಒಂದು ದಿನ ಕ್ಷೇತ್ರದಲ್ಲಿ ಉಳಿದು ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹಾರವನ್ನು ಒದಗಿಸುವ ಭರವಸೆಯನ್ನು ಈ ಹಿಂದೆ ಕುಮಾರಸ್ವಾಮಿ ನೀಡಿದ್ದರು.
ಅದರಂತೆ ಇಂದು ದಿನಪೂರ್ತಿ ರಾಮನಗರದಲ್ಲಿ ಸಾರ್ವಜನಿಕರ ಮನವಿ ಸ್ವೀಕಾರ, ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಗಳನ್ನು ನಡೆಸಿದರು.