ಬಡ್ತಿ ಮೀಸಲಾತಿ ಜಾರಿಗೆ ಆಗ್ರಹ

 

ಬೆಂಗಳೂರು, ಜು.14-ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ವಿಳಂಬ ಧೋರಣೆ ಅನುಸರಿಸದೆ ಈ ಕೂಡಲೇ ಆದೇಶ ಹೊರಡಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೈನಿಕ ದಳದ ಡಾ.ಎಂ.ವೆಂಕಟಸ್ವಾಮಿ, ವಿಧಾನಸಭೆಯಲ್ಲಿ ಬಡ್ತಿ ಮೀಸಲಾತಿ ಕಾಯ್ದೆ ಕುರಿತ ನಿಲುವಳಿ ಸೂಚನೆ ಬಗ್ಗೆ ಚರ್ಚೆ ನಡೆದಾಗ ರಾಜ್ಯ ಸರ್ಕಾರ ಜು.27ರವರೆಗೆ ಕಾಯ್ದೆ ಅನುಷ್ಠಾನಗೊಳಿಸುವುದಿಲ್ಲ ಎಂದು ಹೇಳುವ ಮೂಲಕ ದಲಿತರಿಗೆ ದ್ರೋಹ ಬಗೆದಿದೆ ಎಂದು ದೂರಿದರು.
ಹಲವು ಇಲಾಖೆಗಳಲ್ಲಿನ ಎಸ್ಸಿ-ಎಸ್ಟಿ ಅಧಿಕಾರಿಗಳಿಗೆ ಹಿಂಬಡ್ತಿ ನೀಡಲಾಗಿದ್ದು, ಈ ಹಿಂಬಡ್ತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದ ಸರ್ಕಾರ ಇದೀಗ ಜು.27ರವರೆಗೆ ಕಾಯ್ದೆ ಅನುಷ್ಠಾನಗೊಳಿಸದಿರಲು ನಿರ್ಧರಿಸಿರುವುದು ಸರಿಯಲ್ಲ ಎಂದರು.
ಈ ಹಿನ್ನೆಲೆಯಲ್ಲಿ ದಲಿತ ನೌಕರರು ಇದೇ 16ರಿಂದ ಆರಂಭಿಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯುವ ಧರಣಿಯಲ್ಲಿ ನೂರಾರು ಮಂದಿ ಭಾಗವಹಿಸುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದ ದಲಿತ ವಿರೋಧಿ ನಡೆ ಬದಲಾಗದಿದ್ದರೆ ಮಂತ್ರಿ ಶಾಸಕರನ್ನು ಕಂಡಲ್ಲಿ ಘೇರಾವ್ ಮಾಡುವ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ. ಕಾಯ್ದೆ ಜಾರಿ ಮಾಡಿ ಇಲ್ಲವಾದರೆ ಕುರ್ಚಿ ಖಾಲಿ ಮಾಡಿ ಎಂಬ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜೈ ಭೀಮ್ ದಳದ ವೈ.ಎಸ್.ದೇವೂರ, ಮಾದಿಗ ಸಂಘಟನೆಗಳ ಒಕ್ಕೂಟದ ಕೇಶವಮೂರ್ತಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಸೋರ ಹುಣಸೆ ವೆಂಕಟೇಶ್ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ