ಸಿದ್ದುಗೆ ಡಿಕೆಶಿ ಟಾಂಗ್

 

ಬೆಂಗಳೂರು, ಜು.14-ಯಾರೇ ಆಗಲಿ ಸಲಹೆ ಕೊಡುವುದು ತಪ್ಪಲ್ಲ. ಆದರೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವುದಕ್ಕೂ ಇತಿಮಿತಿ ಇರಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಶುಕ್ರವಾರವಷ್ಟೇ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ತಾವು ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ಕೆಲವು ಸವಲತ್ತುಗಳನ್ನು ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದರು.
ಅದಲ್ಲದೆ ಮೂರು ದಿನಗಳ ಹಿಂದೆ ಮತ್ತೊಂದು ಪತ್ರ ಬರೆದಿದ್ದ ಸಿದ್ದರಾಮಯ್ಯನವರು ಅನ್ನ ಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು 5ರಿಂದ 7 ಕೆಜಿಗೆ ಏರಿಕೆ ಮಾಡಬೇಕು. ಯಾವುದೇ ಕಾರಣಕ್ಕೂ ಕಡಿತ ಮಾಡಬಾರದು ಎಂದು ಕೋರಿದ್ದರು.
ಹೀಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗೆ ಪದೇ ಪದೇ ಪತ್ರ ಬರೆಯುವುದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿರುವ ಶಿವಕುಮಾರ್,ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುವುದಕ್ಕೂ ಇತಿಮಿತಿ ಇರಬೇಕು. ಉಚಿತವಾಗಿ ಸಲಹೆ ಕೊಡುವುದು ಸುಲಭ. ಆದರೆ ನಾವು ನೀಡುವ ಸಲಹೆಗಳು ರಾಜಕಾರಣಕ್ಕೆ ಅವಕಾಶ ಇರಬಾರದು.
ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿವೇಚನೆ ಮುಖ್ಯಮಂತ್ರಿಗಳಿಗಿರುತ್ತದೆ. ಏನೇ ಮಾಡುವುದಾದರೂ ಆರ್ಥಿಕ ಇತಿಮಿತಿಯೊಳಗೆ ಮಾಡಬೇಕಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವುದಾಗಿ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಹೇಳದ್ದಾರೆ.ಈ ಬಗ್ಗೆ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಮ್ಮಿಶ್ರ ಸರ್ಕಾರ ಜನತೆಗೆ ನೀಡಿದ ವಾಗ್ದಾನದಂತೆ ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳನ್ನು ಜಾರಿ ಮಾಡಿ ಯಶಸ್ವಿಯಾದ ಆಡಳಿತ ನೀಡುತ್ತೇವೆ. ಯಾರೂ ಏನೇ ಮಾತನಾಡಿದರೂ ತಲೆಕೆಡಿಸಿಕೊಳ್ಳುವುದಿಲ್ಲ. ಐದು ವರ್ಷ ಸುಭದ್ರ ಸರ್ಕಾರ ನೀಡುವುದು ನಮ್ಮ ಮುಂದಿನ ಸವಾಲು. ಏನೇ ಅಡೆತಡೆಯಾದರೂ ಸರ್ಕಾರ ಮಾತ್ರ ಸುಭದ್ರವಾಗಿರುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ